ಬೀದರ್: ಅಂತರ್ಜಲ ಮಟ್ಟ ಕುಸಿತ ಕಂಡು ತಿಂಗಳಿಂದ ಹನಿ ನೀರಿಗಾಗಿ ನರಕಯಾತನೆ ಅನುಭವಿಸುತ್ತಿದ್ದ ಔರಾದ್ ಪಟ್ಟಣದ ನಿವಾಸಿಗರ ನೋವಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಹೌದು, ಇದು 'ಈಟಿವಿ ಭಾರತ' ವರದಿ ಇಂಪ್ಯಾಕ್ಟ್.
ಜಲಕ್ಷಾಮದಿಂದ ನರಳುತ್ತಿದ್ದ ಔರಾದ್ ಪಟ್ಟಣದ ನೀರಿನ ಬವಣೆಯ ಕುರಿತು 'ಈಟಿವಿ ಭಾರತ' ವಿಸ್ತೃತವಾದ ಸರಣಿ ವರದಿಗಳ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿದೆ. ಹೀಗಾಗಿ ಸಹಾಯಕ ಆಯುಕ್ತ ಶಂಕರ ವಣಿಕ್ಯಾಳ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಔರಾದ್ ಪಟ್ಟಣದ 20 ವಾರ್ಡ್ಗಳಲ್ಲಿ ಪರಿಶಿಲನೆ ನಡೆಸಿ, ನೀರಿನ ಸಮಸ್ಯೆಯ ಭೀಕರತೆಯನ್ನು ತಿಳಿದುಕೊಂಡು ತಕ್ಷಣ ತಹಶೀಲ್ದಾರರ ಕಚೇರಿಯಲ್ಲಿ ತುರ್ತು ಸಭೆ ಕರೆದು, ತಾಲೂಕು ಮಟ್ಟದ ಅಧಿಕಾರಿಗಳ ಮೈ ಚಳಿ ಬಿಡಿಸಿದೆ.
ಸದ್ಯ ಪಟ್ಟಣದಲ್ಲಿರುವ ಜನರಿಗೆ 10ಕ್ಕೂ ಅಧಿಕ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಅಲ್ಲಲ್ಲಿ ಇರುವ ಪುರಾತನ ಬಾವಿಗಳಲ್ಲಿ ತುಂಬಿರುವ ಹೂಳನ್ನು ಎತ್ತುವ ಮೂಲಕ ಜಲಮೂಲ ವೃದ್ಧಿಸಲಾಗಿದ್ದು, ಖಾಸಗಿಯಾಗಿ ಎರಡು ಬಾವಿ ಹಾಗೂ ಬೋರ್ವೆಲ್ಗಳನ್ನು ಕೂಡಾ ಬಾಡಿಗೆ ಮೂಲಕ ತೆಗೆದುಕೊಂಡು ಸಾರ್ವಜನಿಕರಿಗೆ ನೀರು ಪೂರೈಸಲಾಗ್ತಿದೆ. ಅಲ್ಲದೆ ತೆಗಂಪೂರ ಕೆರೆ ಕೆಳಭಾಗದಲ್ಲಿ ಹೊಸ ಬೋರ್ವೆಲ್ ಕೊರೆದು ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗ್ತಿದೆ. ಅಗತ್ಯ ಬಿದ್ದರೆ ಜಲಮೂಲ ಇರುವ ದೂರದ ಗ್ರಾಮಗಳಿಂದಲೂ ನೀರು ತಂದು ನಿವಾಸಿಗರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಶಂಕರ ವಣಿಕ್ಯಾಳ 'ಈಟಿವಿ ಭಾರತ'ಕ್ಕೆ ಭರವಸೆ ನೀಡಿದ್ದಾರೆ.
ಇನ್ನು ಈಟಿವಿ ಭಾರತ ವರದಿಯಿಂದ ನಮ್ಮ ಬಡಾವಣೆಗಳಲ್ಲಿ ಇಂದು ನೀರು ಹರಿಯಲು ಕಾರಣವಾಗಿದೆ ಎಂದು ಸ್ಥಳೀಯ ನಿವಾಸಿಗರಲ್ಲಿ ಸಂತಸಕ್ಕೆ ಪಾರವೇ ಇಲ್ಲ. ಈ ವೇಳೆ ತಹಶೀಲ್ದಾರ್ ಚಂದ್ರಶೇಖರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.