ತುಮಕೂರು: ಜಿಲ್ಲೆ ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಹಾಸನ ಮುಂತಾದ ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಪ್ರಗತಿಯಲ್ಲಿರುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆ ಕಾಮಗಾರಿ ಭರದಿಂದ ಸಾಗಿದೆ.
ಸಕಲೇಶಪುರದ ಗುಂಡ್ಯ ಮತ್ತು ಕೆಂಪುಹೊಳೆ ಬಳಿ ಆರಂಭವಾಗುವ ಯೋಜನೆಯ ಪೈಪ್ ಲೈನ್ ಕಾಮಗಾರಿ, ಹಾಸನ ಜಿಲ್ಲೆಯ ಅರಸೀಕೆರೆ ಮೂಲಕ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ ತಾಲೂಕಿನ ಮೂಲಕ ಹಾದುಹೋಗಲಿದೆ. ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಬಳಿ ಜಲಾಶಯ ನಿರ್ಮಿಸಲಾಗುತ್ತಿದೆ. ಅಲ್ಲದೆ ಅಲ್ಲಿಂದ ಚಿಕ್ಕಬಳ್ಳಾಪುರಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ.
ಬೈರಗೊಂಡ್ಲು ಬಳಿ 5,500 ಹೆಕ್ಟೇರ್ ನಲ್ಲಿ ಜಲಾಶಯವನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಇಲ್ಲಿ 5.45 ಟಿಎಂಸಿ ನೀರು ಸಂಗ್ರಹವಾಗಲಿದೆ. ಅದೇ ಹಾದಿಯಲ್ಲಿ ಸಿಗುವಂತಹ ಕೆರೆಗಳಿಗೆ ನೀರು ತುಂಬಿಸಿ ಕುಡಿಯುವ ನೀರಿನ ಸೌಲಭ್ಯಕ್ಕೆ ಬಳಸಿಕೊಳ್ಳಲಾಗುತ್ತದೆ.
ಜಿಲ್ಲೆಯಲ್ಲಿ ಎತ್ತಿನಹೊಳೆ ಕಾಮಗಾರಿಯ ಬೃಹತ್ ಚಾನಲ್ 3,800 ಕ್ಯೂಸೆಕ್ಸ್ ನೀರು ಹರಿಯುವ ಸಾಮರ್ಥ್ಯವುಳ್ಳದ್ದಾಗಿದೆ. ದಿನದ 24 ಗಂಟೆ ಭರದಿಂದ ಕಾಮಗಾರಿ ಸಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, ಈ ಯೋಜನೆ ಮೂಲಕ 10,000 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.
ಬೈರಗೊಂಡ್ಲು ಬಳಿ 5,500 ಹೆಕ್ಟೇರ್‌ನಲ್ಲಿ ಜಲಾಶಯವನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಈಗಾಗಲೇ ಯೋಜನೆಯ ಅಧಿಕಾರಿಗಳು ಸರ್ವಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಡಿಸಿಎಂ ಜಿ.ಪರಮೇಶ್ವರ್ ತಿಳಿಸಿದ್ದಾರೆ.