ಬೆಂಗಳೂರು: ಕೋವಿಡ್ ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡದೆ ಎಲ್ಲ ಅರ್ಹರಿಗೂ ಲಸಿಕೆ ಹಾಕುವ ಮೂಲಕ ರಾಜ್ಯದ ಜನರನ್ನು ಕಾಪಾಡಬೇಕೆಂದು ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಮುಂದಿನ ಕೆಲವು ತಿಂಗಳಲ್ಲಿ ಮೂರನೇ ಅಲೆ ಪ್ರಾರಂಭವಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದ್ದರಿಂದ ಒಂದೆರಡು ತಿಂಗಳಲ್ಲಿ ಸಂಪೂರ್ಣ ಲಸಿಕೆ ಹಾಕಿಸಬೇಕು. ಲಸಿಕೆಗಳನ್ನು ಕೇಂದ್ರದಿಂದಾದರೂ ಪಡೆಯಬೇಕು, ಇಲ್ಲವೇ ರಾಜ್ಯದಲ್ಲೇ ಉತ್ಪಾದಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ 18 ವರ್ಷ ತುಂಬಿದವರು 4,37,80,330 ಜನರಿದ್ದಾರೆ. ಆದರೆ ಇದುವರೆಗೆ ಎರಡೂ ಡೋಸ್ ಲಸಿಕೆ ನೀಡಿರುವುದು ಕೇವಲ 17,77,751 ಜನರಿಗೆ ಮಾತ್ರ. ಅಂದರೆ ಕೇವಲ ಶೇ. 4.06 ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದರ್ಥ. ಇದರಲ್ಲಿ ರಾಜ್ಯದಲ್ಲಿ 6,85,327 ಜನ ಹೆಲ್ತ್ ಕೇರ್ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದೆ. ಆದರೆ ಎರಡನೇ ಡೋಸ್ ನೀಡಿರುವುದು ಕೇವಲ 4,39,162 ಜನರಿಗೆ ಮಾತ್ರ. 4,40,302 ಜನ ಫ್ರಂಟ್ ಲೈನ್ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದ್ದರೆ, ಎರಡನೆ ಡೋಸ್ ನೀಡಿರುವುದು ಕೇವಲ 1,67,581 ಜನರಿಗೆ ಮಾತ್ರ. 60 ವರ್ಷ ತುಂಬಿದವರಲ್ಲಿ 8,41,056 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 44 ರಿಂದ 59 ವರ್ಷದೊಳಗೆ ಇರುವವರಿಗೆ 32,9,952 ಜನರಿಗೆ ಮಾತ್ರ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಮೊದಲ ಡೋಸ್ ಅನ್ನು ಎಷ್ಟೇ ಜನರಿಗೆ ನೀಡಿದ್ದರೂ ಸಹ ನಿಗದಿತ ಸಮಯದಲ್ಲಿ ಎರಡನೇ ಲಸಿಕೆ ನೀಡದಿದ್ದರೆ ಲಸಿಕೆ ಉಪಯೋಗಕ್ಕೆ ಬರುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗಾಗಿ ಅವಧಿ ಮೀರುವ ಮೊದಲೇ ಎರಡನೇ ಡೋಸನ್ನು ಶೀಘ್ರವಾಗಿ ನೀಡಬೇಕು ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
18 ರಿಂದ 45 ರ ವಯೋಮಾನದವರಲ್ಲಿ ಇದುವರೆಗೆ ಕೇವಲ 5,759 ಜನರಿಗೆ ಮಾತ್ರ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ. ಕೋವಿಡ್ ಎರಡನೇ ಅಲೆಯಲ್ಲಿ ಹೆಚ್ಚು ಬಾಧಿತರಾಗಿ ಸಾವು ನೋವುಗಳಿಗೆ ಗುರಿಯಾಗುತ್ತಿರುವವರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಯುವ ಸಮುದಾಯಕ್ಕೆ ಯುದ್ಧೋಪಾದಿಯಲ್ಲಿ ಲಸಿಕೆಯನ್ನು ನೀಡಬೇಕಾಗಿದೆ. ಕೇಂದ್ರ ಸರ್ಕಾರ ಯುವ ಜನತೆಗೆ ಲಸಿಕೆ ನೀಡುವ ವಿಚಾರದಲ್ಲೂ ಭೀಕರ ರಾಜಕಾರಣ ಮಾಡುತ್ತಿದೆ. ಗುಜರಾತ್, ಉತ್ತರ ಪ್ರದೇಶ ಮುಂತಾದ ರಾಜ್ಯಗಳ ಯುವಕರಿಗೆ ವ್ಯಾಪಕ ಪ್ರಮಾಣದಲ್ಲಿ ಲಸಿಕೆ ಹಾಕಲಾಗುತ್ತಿದೆ. ಆದರೆ ರಾಜ್ಯದಲ್ಲಿ ಬೆರಣಿಕೆಯಷ್ಟು ಜನರಿಗೆ ಮಾತ್ರ ನೀಡಲಾಗಿದೆ. ಕೇಂದ್ರ ಮಾಡುತ್ತಿರುವ ಅವೈಜ್ಞಾನಿಕ ಕ್ರಮಗಳಿಂದಾಗಿ ದೇಶದ ಜನ ಭಾರಿ ಗಂಡಾಂತರ ಎದುರಿಸಬೇಕಾಗಿದೆ. ದೇಶದ ಯಾವುದೋ ಒಂದು ಭಾಗದ ಜನರಿಗೆ ಲಸಿಕೆ ನೀಡಿ ಉಳಿದವರು ವಂಚಿತರಾದರೆ ವೈರಸ್ನಲ್ಲಿ ಮ್ಯುಟೇಶನ್ನುಗಳಾಗಿ ಕಡೆಗೆ ಅದು ಲಸಿಕೆಗಳಿಗೂ ಪ್ರತಿರೋಧ ಬೆಳೆಸಿಕೊಂಡರೆ ಹಾಕುವ ಲಸಿಕೆಗಳೂ ಸಹ ನಿರುಪಯುಕ್ತವಾಗುತ್ತವೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಾದರೆ ಲಸಿಕೆ ಹಾಕಿಸಿಕೊಂಡವರೂ ಸಹ ಭೀಕರ ಗಂಡಾಂತರಕ್ಕೆ ತುತ್ತಾಗುತ್ತಾರೆ ಎಂದಿದ್ದಾರೆ.
ಮಹಾರಾಷ್ಟ್ರ ಈಗಾಗಲೇ ಕೋವ್ಯಾಕ್ಸಿನ್ ಲಸಿಕೆಯನ್ನು ರಾಜ್ಯ ಸರ್ಕಾರದ ಅಧೀನದಲ್ಲಿರುವ ಕಂಪನಿಗಳ ಮೂಲಕ ಉತ್ಪಾದನೆಯಲ್ಲಿ ತೊಡಗಿದೆ ಎಂಬ ವರದಿಗಳಿವೆ. ಕರ್ನಾಟಕವೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಒತ್ತಾಯಿಸುತ್ತೇನೆ. ಕೋವಿಡ್ ನಿಯಂತ್ರಣದಲ್ಲೂ ಮುಂಬೈ ಮಾದರಿಯನ್ನು ಸರ್ವೋಚ್ಛ ನ್ಯಾಯಾಲಯವು ಶ್ಲಾಘಿಸಿದೆ. ಅದರ ಕುರಿತು ಕೂಡ ರಾಜ್ಯ ಸರ್ಕಾರ ಸೂಕ್ತ ತಿಳುವಳಿಕೆ ಪಡೆದುಕೊಳ್ಳುವುದು ಸೂಕ್ತ ಎಂದು ಹೇಳಿದ್ದಾರೆ.
18 ವರ್ಷ ತುಂಬಿದವರಿಗೆ ಲಸಿಕೆ ಹಾಕಲು ಆನ್ಲೈನ್ ಮುಖಾಂತರ ನೋಂದಾಯಿಸಿಕೊಳ್ಳಬೇಕೆಂಬ ನಿಯಮವನ್ನು ರದ್ದುಪಡಿಸಬೇಕು. ಹೀಗೆ ಮಾಡಿದರೆ ಕಾರ್ಮಿಕರು, ಬಡವರು ಲಸಿಕೆಗಳಿಂದ ವಂಚಿತರಾಗುತ್ತಾರೆ. ಇದುವರೆಗೂ ಮಾಡುತ್ತಿದ್ದಂತೆ ಸ್ಥಳದಲ್ಲಿಯೇ ನೋಂದಾಯಿಸಿಕೊಂಡು ಲಸಿಕೆ ಹಾಕುವುದೇ ಉತ್ತಮ ಎಂಬ ಅಭಿಪ್ರಾಯವನ್ನು ಸಿದ್ದರಾಮಯ್ಯ ತಮ್ಮ ಸುದೀರ್ಘ ಪತ್ರದಲ್ಲಿ ವಿವರಿಸಿದ್ದಾರೆ.