ಬೆಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಮುಂದಾಳತ್ವದಲ್ಲೇ ಮೇಕೆದಾಟು ಯೋಜನೆ ಬಿಕ್ಕಟ್ಟು ಪರಿಹರಿಸೋಣ. ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರ ಅವರಿಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮೇಕೆದಾಟು ಯೋಜನೆ ಸಂಬಂಧ ರಾಜ್ಯ ಸರ್ಕಾರ ವಿಳಂಬ ಧೋರಣೆ ತೋರುತ್ತಿದೆ ಎಂದು ಕೇಂದ್ರ ಸಚಿವ ಸದಾನಂದಗೌಡರು ಹೇಳಿದ್ದಾರೆ. ಅವರ ಮುಂದಾಳತ್ವದಲ್ಲೇ ಇದನ್ನು ಕೊಂಡೊಯ್ದು ಸಮಸ್ಯೆ ಬಗೆಹರಿಸಬೇಕು. ಈ ರಾಜ್ಯದ ಹತ್ತಾರು ವರ್ಷದ ಹೋರಾಟಕ್ಕೆ ಅವರೇ ನಾಂದಿ ಹಾಡಲಿ. ಅವರ ಜತೆ ನಮ್ಮ ಸರ್ಕಾರವಿದೆ. ಈ ವಿಚಾರವಾಗಿ ನನಗೆ ರಾಜಕಾರಣ ಮಾಡಲು ಇಷ್ಟ ಇಲ್ಲ. ರಾಜ್ಯದಿಂದ ಎಲ್ಲ ರೀತಿಯ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ. ಅವರಿಗೆ ಯಾವ ಸಹಕಾರ ಬೇಕಾದರೂ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು.
ಮೇಕೆದಾಟು ಯೋಜನೆ ಸಂಬಂಧ ನಾನು ಸದಾನಂದಗೌಡರ ಜತೆ ಸಭೆ ನಡೆಸುತ್ತೇನೆ. ನಾವು ಸಹ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದೆವು. 66-67 ಟಿಎಂಸಿ ನೀರು ಲಭ್ಯತೆ ಇದೆ. ಅದನ್ನು ಕುಡಿಯುವ ನೀರು ಉದ್ದೇಶಕ್ಕಾಗಿ ಬಳಸಬಹುದಾಗಿದೆ ಎಂದು ಪ್ರದಿಪಾದಿಸಿದ್ದೆವು. ಬಿಜೆಪಿಯ ಎಲ್ಲ ಕೇಂದ್ರ ಸಚಿವರು ಸಹಕಾರ ಕೊಟ್ಟಿದ್ದರು. ಸದಾನಂದಗೌಡರು ಹಾಗೂ ನಾನು ದೇವೇಗೌಡರ ಮನೆಗೆ ಹೋಗಿ ಚರ್ಚೆ ನಡೆಸಿ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದೆವು. ಈಗ ಮತ್ತೆ ಸದಾನಂದಗೌಡರನ್ನು ನಾನು ಮತ್ತು ನನ್ನ ತಂಡ ಭೇಟಿ ಮಾಡಿ ವಾಸ್ತವಾಂಶ ತಿಳಿಸಲಿದ್ದೇವೆ. ಅವರು ಹೇಳಿದ ದಿನಾಂಕದಂದು ಹೋಗಿ ಭೇಟಿ ಮಾಡಲಿದ್ದೇವೆ ಎಂದು ಸ್ಪಷ್ಟನೆ ತಿಳಿಸಿದರು.
ನಮ್ಮಲ್ಲಿ ನೀರಿದ್ದರೆ ಕೊಡ್ತೇವೆ :
ನಮ್ಮ ಎಲ್ಲ 4 ಜಲಾಶಯಗಳಲ್ಲಿ ಸುಮಾರು 13 ಟಿಎಂಸಿ ನೀರಿದೆ. ಮಳೆಯ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಮುಂದೆ ಯಾವುದೇ ಆಯ್ಕೆ ಇಲ್ಲ ಎಂದು ಸಚಿವ ಡಿಕೆಶಿ ಸ್ಪಷ್ಟಪಡಿಸಿದರು. ಇತ್ತ ಮಹಾರಾಷ್ಟ್ರ ಸರ್ಕಾರ ನೀರು ಬಿಡುಗಡೆ ಮಾಡುವ ಭರವಸೆ ನೀಡಿದೆ. ರೈತರ ಹಿತ ಕಾಪಾಡುವುದು ನಮ್ಮ ಆದ್ಯತೆ. ನೀರು ಬಿಡುಗಡೆ ಸಂಬಂಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಪನ್ನು ನಾವು ಗೌರವಿಸುತ್ತೇವೆ. ನಮ್ಮಲ್ಲಿ ನೀರಿದ್ದರೆ ಕೊಡುತ್ತೇವೆ. ನೀರಿಲ್ಲವಾದರೆ, ಸಂಕಷ್ಟ ಸೂತ್ರ ಅನುಸರಿಸಬೇಕಾಗುತ್ತದೆ. ಇದನ್ನು ಸಂಬಂಧಿತ ಪ್ರಾಧಿಕಾರಕ್ಕೆ ತಿಳಿಸಿದ್ದೇವೆ ಎಂದು ಮಾಹಿತಿ ನೀಡಿದರು.