ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಮೂರನೇ ಬಾರಿ ಸಂಸತ್‌ಗೆ ಆಯ್ಕೆ ಬಯಸಿ ಕಣಕ್ಕಿಳಿದ್ದ ಸಚಿವ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಹ್ಯಾಟ್ರಿಕ್ ಜಯಭೇರಿ
ಲೋಕಸಮರದ ಫಲಿತಾಂಶಕ್ಕಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದ ದೇಶದ ಜನ ಹಾಗೂ ಅಭ್ಯರ್ಥಿಗಳಿಗೆ ಕೊನೆಗೂ ಫಲಿತಾಂಶ ಹೊರಬಿದ್ದಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸತತ 2 ಭಾರಿ ಸಂಸದರಾಗಿ ಆಯ್ಕೆಯಾಗಿರುವ ಡಿ.ಕೆ.ಸುರೇಶ್ ಈ ಭಾರಿಯೂ ಗೆಲುವಿನ ನಗೆ ಬೀರಿದ್ದಾರೆ. ಸುರೇಶ್ ಗೆಲುವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕ್ಷೇತ್ರದಾದ್ಯಂತ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಡಿಕೆ ಸುರೇಶ್ ಗೆಲುವಿಗೆ ಕಾರಣವಾದ ಅಂಶಗಳೇನು..?
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೂ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಮತ್ತು ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಇನ್ನು ತಮ್ಮ ಸಹೋದರನನ್ನು ಹೇಗಾದ್ರೂ ಮಾಡಿ ಮತ್ತೆ ಸಂಸತ್ ಗೆ ಕಳುಹಿಸಬೇಕು ಅಂತ ಪಣತೊಟ್ಟಿದ್ದ ದೋಸ್ತಿ ಸರ್ಕಾರದ ಸಚಿವ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಅಲ್ಲದೆ, ಜೆಡಿಎಸ್ ಪಕ್ಷವು ಕಾಂಗ್ರೆಸ್ ಬೆನ್ನಿಗೆ ನಿಂತ ಕಾರಣ ಮೈತ್ರಿ ಅಭ್ಯರ್ಥಿಯಾಗಿದ್ದ ಡಿ.ಕೆ.ಸುರೇಶ್ ಗೆಲುವು ಸುಲಭವಾಯ್ತು ಅಂತ ವಿಶ್ಲೇಷಿಸಲಾಗ್ತಿದೆ.
ಎಂ.ವಿ.ಚಂದ್ರಶೇಖರ ಮೂರ್ತಿ ಕಾಂಗ್ರೆಸ್ ನಿಂದ ಈ ಕ್ಷೇತ್ರದಲ್ಲಿ 6 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೆ, ಸಿಎಂ ಕುಮಾರಸ್ವಾಮಿ 2 ಬಾರಿ ಆಯ್ಕೆಯಾಗಿದ್ರು. ಚಂದ್ರಶೇಖರಮೂರ್ತಿ ಅವರನ್ನು ಹೊರತು ಪಡಿಸಿದರೆ ಬೇರೆ ಯಾರು ಹ್ಯಾಟ್ರಿಕ್ ಗೆಲುವು ಸಾಧಿಸಿಲ್ಲ. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದ 2009ರ ಚುನಾವಣೆಯಲ್ಲಿ ಬಿಜೆಪಿಯ ಸಿ.ಪಿ.ಯೋಗೇಶ್ವರ್ ವಿರುದ್ಧ ಗೆದ್ದಿದ್ದ ಹೆಚ್‌ಡಿಕೆ ನಂತ್ರ ರಾಜೀನಾಮೆ ಸಲ್ಲಿಸಿದರು. 2013ರಲ್ಲಿ ಎದುರಾದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಡಿ.ಕೆ.ಸುರೇಶ್ ರವರು ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನೇ ಮಣಿಸಿದ್ದರು. 2014ರಲ್ಲಿ ಪುನರಾಯ್ಕೆಯಾದ ಕಾಂಗ್ರೆಸ್ಸಿನ ಡಿ.ಕೆ.ಸುರೇಶ್ ಈ ಬಾರಿಯ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಮತ್ತೊಮ್ಮೆ ದೆಹಲಿಗೆ ಹಾರಿದ್ದಾರೆ.
ಒಟ್ಟಾರೆ, ಬಿಜೆಪಿಯ ನೇರ ಸವಾಲಿನ ನಡುವೆಯೂ ಮತ್ತೆ ಗೆಲುವು ದಾಖಲಿಸಿರೋ ಡಿ.ಕೆ.ಸುರೇಶ್ ಕ್ಷೇತ್ರದಲ್ಲಿ ರೈತರು, ಜನಸಾಮಾನ್ಯರ ಸಮಸ್ಯೆಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸ್ಪಂದಿಸಬೇಕು ಅನ್ನೋದು ಸ್ಥಳೀಯರ ಒತ್ತಾಯವಾಗಿದೆ.