ಬೆಂಗಳೂರು: ನಗರದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಎದುರಾಗಿದ್ದು, ಚಾಮರಾಜನಗರ ಮಾದರಿಯ ಘಟನೆ ಇಲ್ಲಿ ಮರುಕಳಿಸದಿರಲಿ ಎಂದು ಸಂಸದ ಡಿ.ಕೆ. ಸುರೇಶ್ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿರುವ ಅವರು, ಆರ್ ಆರ್ ನಗರದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ 200ಕ್ಕೂ ಹೆಚ್ಚು ಜನ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾರೆ. ಸಂಜೆ 5 ಗಂಟೆಗೆ ಆಕ್ಸಿಜನ್ ಮುಕ್ತಾಯ ಆಗ್ತಿದೆ. ಜಿಲ್ಲಾಧಿಕಾರಿಗಳಿಗೂ ಆಡಳಿತ ಮಂಡಳಿ ತಿಳಿಸಿದೆ. ನಾನು ಕೂಡ ಕರೆ ಮಾಡಿ ತಿಳಿಸಿದ್ದೇನೆ. ಆರೋಗ್ಯ ಕಾರ್ಯದರ್ಶಿಗಳಿಗೆ ವಿಷಯ ತಿಳಿಸಲಾಗಿದೆ ಎಂದು ವಿವರಿಸಿದ್ದಾರೆ.
ಮುಖ್ಯ ಕಾರ್ಯದರ್ಶಿಗಳಿಗೆ ವಿಷಯ ತಿಳಿಸಿದ್ದೇನೆ. ದಯವಿಟ್ಟು ಆಕ್ಸಿಜನ್ ವ್ಯವಸ್ಥೆ ಮಾಡಿಸಿ ಜನರ ಜೀವ ಉಳಿಸಿ. ಮತ್ತೊಮ್ಮೆ ಚಾಮರಾಜನಗರದ ಘಟನೆ ಆದ ರೀತಿಯಲ್ಲಿ ಇಲ್ಲಿ ಆಗುವುದು ಬೇಡ ಎಂದಿದ್ದಾರೆ.
ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ
ಬೆಂಗಳೂರು ನಗರ ಜಿಲ್ಲಾ ಎಸ್ಪಿಗೆ ಕರೆ ಮಾಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದು, ಕೂಡಲೇ ರಾಜರಾಜೇಶ್ವರಿ ನಗರ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಎದುರಾಗಿರುವ ಆಮ್ಲಜನಕ ಕೊರತೆ ನಿವಾರಿಸುವಂತೆ ಒತ್ತಾಯಿಸಿದ್ದಾರೆ.
ಕರೆಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಸಿದ್ದರಾಮಯ್ಯ ಅಮಾಯಕರ ಜೀವ ಬಲಿಯಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ.
ಟ್ವೀಟ್ ಮಾಡಿ ಒತ್ತಡ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ರಾಜರಾಜೇಶ್ವರಿನಗರ ಆಸ್ಪತ್ರೆಯ ಆಮ್ಲಜನಕದ ಕೊರತೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದು, ರಾಜರಾಜೇಶ್ವರಿನಗರ ಆಸ್ಪತ್ರೆ ಹಾಗೂ ಮೆಡೆಕ್ಸ್ ಆಸ್ಪತ್ರೆಗಳಲ್ಲಿ ಆಸ್ಪತ್ರೆಯಲ್ಲಿ ಮುಂದಿನ ಒಂದು ಗಂಟೆಯಲ್ಲಿ ಆಮ್ಲಜನಕ ಕೊರತೆ ಎದುರಾಗಲಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಈ ಬಗ್ಗೆ ಕೂಡಲೇ ಗಮನಹರಿಸಬೇಕು. ಆಮ್ಲಜನಕ ಕೊರತೆಯನ್ನು ನಿವಾರಿಸಿ ಜೀವಗಳನ್ನು ಉಳಿಸಿ ಎಂದು ಒತ್ತಾಯಿಸಿದ್ದಾರೆ.