ಬೆಂಗಳೂರು: ಜನಸಾಮಾನ್ಯರು ಕೊರೊನಾ, ಬ್ಲ್ಯಾಕ್ ಫಂಗಸ್, ಬೆಲೆ ಏರಿಕೆಯಂತಹ ಸಮಸ್ಯೆಗಳಿಂದ ಸಾಯುತ್ತಿರುವಾಗ ಬಿಜೆಪಿ ನಾಯಕರು ಅಧಿಕಾರದ ಆಸೆಗೆ ಚೆಲ್ಲಾಟವಾಡುತ್ತಿದ್ದಾರೆ. ಜನ ಕೊಟ್ಟಿರುವ ಅಧಿಕಾರವನ್ನು ಸಾಧ್ಯವಾದರೆ ನಡೆಸಲಿ, ಇಲ್ಲವೇ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ಕೆಳಗಿಳಿಯಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗುಡುಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿ, 'ನನಗೆ ಬಂದಿರುವ ಮಾಹಿತಿ ಪ್ರಕಾರ ಕೆಲವು ಸಚಿವರು 14-15 ಮಠಗಳಿಗೆ ಭೇಟಿ ನೀಡಿದ್ದಾರೆ. ಯಾವ ಸಚಿವರು ಯಾವ ಮಠಕ್ಕೆ ಬಂದಿದ್ದಾರೆ, ಯಾವ ಸಚಿವರು ಲ್ಯಾಪ್ ಟಾಪ್ ಸಮೇತ ಬಂದಿದ್ದರು ಎಂದು ನನಗೆ ನಮ್ಮ ಕಾರ್ಯಕರ್ತರೇ ಕರೆ ಮಾಡಿ ಮಾಹಿತಿ ಕೊಟ್ಟಿದ್ದಾರೆ. ನಾನು ಕೂಡ ಈ ಮಾಹಿತಿ ಪರಿಶೀಲಿಸಿದ್ದು, ಮಠದವರೇ ಅವರಿಗೆ ಬುದ್ಧಿವಾದ ಹೇಳಲಿ, ಯಾವ ಬುದ್ಧಿಮಾತು ಹೇಳಬೇಕು ಎಂಬುದು ಅವರಿಗೆ ಬಿಟ್ಟದ್ದು, ಅದನ್ನು ಹೇಳುವುದು ನನ್ನ ಕೆಲಸವಲ್ಲ. ಈ ಮಧ್ಯೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು 65 ಜನ ಶಾಸಕರು ಸಿಎಂ ಬೆಂಬಲ ಪತ್ರಕ್ಕೆ ಸಹಿ ಹಾಕಿರುವುದಾಗಿ ಹೇಳಿದ್ದಾರೆ. ಅವರಿಗೆ ಗೌರವ ಇರುವುದು ನಿಜವೇ, ಆದರೆ ಆ ಶಾಸಕರ ಪಟ್ಟಿ ಬಿಡುಗಡೆ ಮಾಡಲಿ. ಅನಂತರ ನಾವು ಮುಂದಿನ ಪ್ರತಿಕ್ರಿಯೆ ನೀಡುತ್ತೇವೆ ಎಂದರು.
ಪತ್ರ ಬರೆದಿದ್ದನ್ನು ನೋಡಿದ್ದೇವೆ. ಗ್ರಾಮೀಣಾಭಿವೃದ್ಧಿ ಸಚಿವರು ರಾಜ್ಯಪಾಲರಿಗೆ ಪತ್ರ ಬರೆದಿದ್ದನ್ನೂ ನಾವು ನೋಡಿದ್ದೇವೆ. ಮಠಗಳಿಗೆ ಹೋಗಿದ್ದನ್ನೂ ನೋಡಿದ್ದೇವೆ, ಸಿಡಿ ವಿಚಾರ ನೋಡಿದ್ದೇವೆ. ಯಾರು ಯಾವ ಹೇಳಿಕೆ ಕೊಟ್ಟಿದ್ದಾರೆ, ಅದಕ್ಕೆ ಹೇಗೆ, ಉಲ್ಟಾ ಹೊಡೆದಿದ್ದಾರೆ ಎಂಬುದನ್ನೂ ನೋಡಿದ್ದೇವೆ. ಇವರಿಗೆ ಚೆಲ್ಲಾಟ, ಜನರಿಗೆ ಪ್ರಾಣ ಸಂಕಟ. ಇವರು ಜನರನ್ನು ರಕ್ಷಿಸುವ ಬದಲು, ಹೆಣಗಳ ಬೂದಿ ನೀಡುತ್ತಿದ್ದಾರೆ ಎಂದು ಡಿಕೆಶಿ ಗರಂ ಆದರು.
ಒಟ್ಟಾರೆ ಈ ಸರ್ಕಾರದ ಆಡಳಿತ ಯಂತ್ರ ಕುಸಿದಿದೆ. ಶಾಸಕರು ಬೀದಿಗಳಲ್ಲಿ ಕಚ್ಚಾಡುತ್ತಿದ್ದಾರೆ. ಸಚಿವರ ಮಧ್ಯೆ ಭಿನ್ನಾಭಿಪ್ರಾಯ ನೋಡಿದ್ದೇವೆ. ಒಬ್ಬರು ಲಸಿಕೆಗೆ ಜಾಗತಿಕ ಟೆಂಡರ್ ಅಂತಾರೆ, ಆರೋಗ್ಯ ಸಚಿವರು ಈ ಬಗ್ಗೆ ಗೊತ್ತಿಲ್ಲ ಅಂತಾರೆ. ಅಧಿಕಾರಿಗಳು ಕಚ್ಚಾಡುತ್ತಿದ್ದಾರೆ. ಏನೆಲ್ಲ ಸಮಸ್ಯೆಗಳಿಂದ ಜನ ನರಳುತ್ತಿರುವಾಗ ಇವರು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ನಾವು ಅವರ ಕಚ್ಚಾಟದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಸರ್ಕಾರ ಕೋವಿಡ್ ಸಮಸ್ಯೆ ಬಗೆಹರಿಸಲಿ, ಅಧಿಕಾರಿಗಳ ಆಡಿಯೋ ಸಾಕ್ಷಿಯನ್ನು ಬಿಜೆಪಿ ನಾಯಕರು ನ್ಯಾಯಾಲಯಕ್ಕೆ ನೀಡಲಿ ಎಂದು ಒತ್ತಾಯಿಸಿದರು.