ಅಥಣಿ: ಹೊರವಲಯದ ಕಿತ್ತೂರು ರಾಣಿ ಚೆನ್ನಮ್ಮ ಕೋವಿಡ್ ಕೇರ್ ಸೆಂಟರ್ಗೆ 50 ಲಕ್ಷ ರೂಪಾಯಿಗಳ ಮೌಲ್ಯದ ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಡಿಸಿಎಂ ಲಕ್ಷ್ಮಣ್ ಸವದಿ ವಿತರಿಸಿದರು.
ಸ್ವಂತ ಹಣದಲ್ಲಿ ಖರೀದಿಸಿದ ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿದ್ದು, ನಾಳೆಯಿಂದ ರಾಣಿ ಚೆನ್ನಮ್ಮ ಕೋವಿಡ್ ಕೇರ್ ಸೆಂಟರ್ ಪ್ರಾರಂಭವಾಗುವದರಿಂದ ಸೋಂಕಿತರಿಗೆ ಉಸಿರಾಟ ತೊಂದರೆ ಆಗದಂತೆ ಡಿಸಿಎಂ ಲಕ್ಷ್ಮಣ್ ಸವದಿ ಮಾನವೀಯತೆ ಮೆರೆದಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಥಣಿಯ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ವಸತಿ ಶಾಲೆಯಲ್ಲಿ ಸುಮಾರು 60 ಹಾಸಿಗೆಗಳುಳ್ಳ ಉಚಿತ ಕೋವಿಡ್ ಕೇರ್ ಸೆಂಟರ್ ನಾಳೆಯಿಂದ ಪ್ರಾರಂಭಿಸುತ್ತಿದ್ದು ಅಧಿಕೃತವಾಗಿ ಚಾಲನೆ ಸಿಗಲಿದೆ. ಕೊರೊನಾ ಮಹಾಮಾರಿಯಿಂದ ಹೊರಗಡೆ ಆಸ್ಪತ್ರೆಗಳಲ್ಲಿ ಬೆಡ್ ಆಕ್ಸಿಜನ್ ಸಿಗದೆ ತೊಂದರೆ ಉಂಟಾಗಿದೆ. ಇದರಿಂದಾಗಿ 10 ಲೀಟರ್ ಹಾಗೂ 15 ಲೀಟರ್ ಸಾಮರ್ಥ್ಯವುಳ್ಳ 50 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಈಗಾಗಲೇ ಖರೀದಿಸಲಾಗಿದೆ. ನಾಳೆಯಿಂದ ಸಾರ್ವಜನಿಕರ ಉಪಯೋಗಕ್ಕೆ ಬರಲಿವೆ ಎಂದು ಹೇಳಿದರು.
ಆಕ್ಸಿಜನ್ ಕಾನ್ಸನ್ಟ್ರೇಟರ್ ಕಿಟ್ ಜೊತೆಗೆ ಜ್ವರ ಪರೀಕ್ಷೆ ಮಾಡುವ ಥರ್ಮಾಮೀಟರ್, ಸ್ಯಾಚುರೇಷನ್ ಹಾಗೂ ಪಲ್ಸ್ ಚೆಕ್ ಮಾಡುವ ಆಕ್ಸಮೀಟರ್ ಉಳ್ಳ ಕಿಟ್ಗಳನ್ನು ಕೂಡ ನೀಡಲಾಗುತ್ತಿದೆ. ಕೊರೊನಾ ಮಹಾಮಾರಿಗೆ ಅಥಣಿಯ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸಿಗದೆ ಸಂಕಷ್ಟ ಪರಿಸ್ಥಿತಿಯಲ್ಲಿರುವ ಜನತೆಗೆ ಸುಸಜ್ಜಿತ ಆಕ್ಸಿಜನ್ ಕಾನ್ಸನ್ಟ್ರೇಟರ್ ಹಾಗೂ ಬೆಡ್ ನೀಡುವ ಮೂಲಕ ಪ್ರಾಥಮಿಕ ಚಿಕಿತ್ಸೆ ನೀಡುವ ಮುಖೇನ ಅಳಿಲು ಸೇವೆ ಮಾಡುತ್ತಿರುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ಕೊರೊನಾ ಬಂದಿದೆಯೆಂದು ಉದಾಸೀನತೆ ತೋರದೆ ಕೂಡಲೇ ಚಿಕಿತ್ಸೆ ಪಡೆಯಬೇಕು. ಧೈರ್ಯದಿಂದ ಈ ರೋಗವನ್ನು ಎದುರಿಸಬೇಕಾಗಿದೆ. ಭಯದಿಂದಲೇ ಅನೇಕರು ತಮ್ಮ ಉಸಿರು ಚೆಲ್ಲಿರುವ ಉದಾಹರಣೆ ನಮ್ಮ ಕಣ್ಣಮುಂದಿದೆ. ಇದರಿಂದಾಗಿ ಜನತೆ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕೆಂದು ಜನತೆಯಲ್ಲಿ ಡಿಸಿಎಂ ಸವದಿ ಮನವಿ ಮಾಡಿದರು.