ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ ಜಾಲ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿರುವ ಕ್ರಮ ರದ್ದು ಕೋರಿ ಕೇರಳದ ರಿಜೇಶ್ ರವೀಂದ್ರನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.
ನ್ಯಾರ್ಕೋಟಿಕ್ ಕಂಟ್ರೋಲ್ ಬ್ಯುರೋ (ಎನ್ ಸಿಬಿ) ಸಲ್ಲಿಸಿರುವ ಅಂತಿಮ ವರದಿ ಆಧರಿಸಿ ವಿಚಾರಣಾ ನ್ಯಾಯಾಲಯ ಕೈಗೊಂಡಿರುವ ಕಾಗ್ನಿಜೆನ್ಸ್ ರದ್ದುಪಡಿಸುವಂತೆ ಕೇರಳ ಮೂಲದ ರಿಜೇಶ್ ರವೀಂದ್ರನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್. ಬಿ ಪ್ರಭಾಕರ ಶಾಸ್ತ್ರಿ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ತೀರ್ಪಿನಲ್ಲಿ, ವಿಚಾರಣಾ ನ್ಯಾಯಾಲಯದ ಕ್ರಮದಲ್ಲಿ ಯಾವುದೇ ಲೋಪವಿಲ್ಲ. ಮಾದಕ ವಸ್ತುಗಳ ಕಾಯ್ದೆ 1985ರ ನಿಯಮದಂತೆ ಎನ್ ಸಿಬಿ ದಾಖಲಿಸಿರುವ ದೂರನ್ನೇ ಅಂತಿಮ ತನಿಖಾ ವರದಿಯಂತೆ ಪರಿಗಣಿಸಬಹುದಾಗಿದೆ. ಆ ಪ್ರಕಾರ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿರುವ ಕ್ರಮ ಸರಿಯಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಹಾಗೆಯೇ, ಎನ್ ಸಿಬಿ ನಿಯಮಾನುಸಾರ 180 ದಿನಗಳಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ವರದಿ ಸಲ್ಲಿಸಿಲ್ಲ ಎಂಬ ಅರ್ಜಿದಾರರ ವಾದವನ್ನು ಪೀಠ ತಿರಸ್ಕರಿಸಿದೆ.
ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಹರಡಿರುವ ಈ ಡ್ರಗ್ಸ್ ಮಾರಾಟ ಜಾಲ ಪ್ರಕರಣದಲ್ಲಿ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ಪೇಜ್-3 ಪಾರ್ಟಿ ಆಯೋಜಕ ಮತ್ತು ಡ್ರಗ್ ಪೆಡ್ಲರ್ ವಿರೇನ್ ಖನ್ನಾ ಮತ್ತಿತರರನ್ನು ಬಂಧಿಸಲಾಗಿತ್ತು. ಸದ್ಯ ಸಂಜನಾ ಮತ್ತು ರಾಗಿಣಿ ದ್ವಿವೇದಿ ಜಾಮೀನು ಪಡೆದಿದ್ದಾರೆ. ಮತ್ತಷ್ಟು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಪ್ರಾಸಿಕ್ಯೂಷನ್ ಮುಂದುವರೆದಿದೆ.