ನವದೆಹಲಿ: ಎರಡು ದಿನಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ಮಾಜಿ ಸಿಎಂ ಎನ್,ಡಿ.ತಿವಾರಿ ಪುತ್ರ ರೋಹಿತ್ ಶೇಖರ್ ತಿವಾರಿ ಮರಣೋತ್ತರ ಪರೀಕ್ಷೆ ಹಲವು ಅಚ್ಚರಿಯನ್ನು ಹೊರಗೆಡವಿದೆ.
ರೋಹಿತ್ ಸತ್ತು 15 ಗಂಟೆಗಳ ಬಳಿಕ ಮನೆಯವರಿಗೆ ತಿಳಿದಿದೆ. ದಿಂಬಿನ ಮೂಲಕ ಉಸಿರುಗಟ್ಟಿ ಸಾಯಿಸಿರುವ ಸಾಧ್ಯತೆಯೂ ವರದಿಯಲ್ಲಿ ಉಲ್ಲೇಖವಾಗಿದೆ. ರೋಹಿತ್ ಸಾವು ಅಸ್ವಾಭಾವಿಕ ಎನ್ನುವುದನ್ನು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ರೋಹಿತ್ ಏಪ್ರಿಲ್ 16ರ ಮಧ್ಯರಾತ್ರಿ 1.30ಕ್ಕೆ ಸಾವನ್ನಪ್ಪಿದ್ದರು, ಆದರೆ ಮರು ದಿನ ಸಂಜೆ 5ರ ವೇಳೆಗೆ ಆಸ್ಪತ್ರೆಗೆ ಕರೆತರಲಾಗಿದೆ ಎನ್ನುವ ವಿಚಾರ ಮರಣೋತ್ತರ ವರದಿಯಲ್ಲಿದೆ.
ಶುಕ್ರವಾರ ದೆಹಲಿ ಅಪರಾಧ ದಳಕ್ಕೆ ಪ್ರಕರಣವನ್ನು ಹಸ್ತಾಂತರ ಮಾಡಲಾಗಿದ್ದು, ಇದಕ್ಕೂ ಮುನ್ನ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಅಪರಾಧ ದಳ ರೋಹಿತ್ ಶೇಖರ್ ತಿವಾರಿ ಮನೆಯಲ್ಲಿ ಸಂಪೂರ್ಣ ಶೋಧ ನಡೆಸಿತ್ತು.
ಸಿಸಿಟಿವಿ ದೃಶ್ಯಗಳ ಪ್ರಕಾರ ಸಾಯುವ ಹಿಂದಿನ ರೋಹಿತ್ ಕಂಠಪೂರ್ತಿ ಕುಡಿದು ಬಂದಿದ್ದ. ಮನೆಗೆ ಬಂದು ಮಲಗಿದ್ದ ಆತ ಮರು ದಿನ ಸಂಜೆಯ ವೇಳೆ ಸಾವನ್ನಪ್ಪಿದ್ದ ಎನ್ನುವುದು ತಿಳಿದು ಬಂದಿದೆ.
ಮಗನ ಸಾವಿನ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ತಾಯಿ ಉಜ್ಜಲ ಶರ್ಮ, ರೋಹಿತ್ ಸಾವಿನಲ್ಲಿ ಯಾವುದೇ ಸಂಶಯವಿಲ್ಲ. ಸ್ವಾಭಿಕ ಸಾವು, ಆದರೆ ಸಾವಿಗೆ ಕಾರಣವಾದ ಪರಿಸ್ಥಿತಿ ಬಗ್ಗೆ ಕೆಲ ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದರು.