ಸೂರತ್ (ಗುಜರಾತ್): ಗುಜರಾತ್ ಶಾಸಕರೊಬ್ಬರು ಸಲ್ಲಿಸಿದ ಕ್ರಿಮಿನಲ್ ಮಾನಹಾನಿ ಮೊಕದ್ದಮೆಯಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಸೂರತ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿ, 'ಮೋದಿ' ಉಪನಾಮ ಹೊಂದಿರುವ ಜನರ ಮೇಲೆ ಯಾವುದೇ ಮಾನಹಾನಿಕರ ಹೇಳಿಕೆ ನೀಡಿರುವುದನ್ನು ನಿರಾಕರಿಸಿದ್ದಾರೆ.
'ಮೋದಿ' ಉಪನಾಮ ಕುರಿತು ರಾಹುಕ್ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ಸೂರತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಮೊಕದ್ದಮೆ ಹೂಡಿದ್ದಾರೆ.
ಸೂರತ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ಎ.ಎನ್. ದೇವ್ ಅವರ ಮುಂದೆ ನೀಡಿದ ಹೇಳಿಕೆಯಲ್ಲಿ, 2019ರ ಲೋಕಸಭಾ ಚುನಾವಣೆಗೆ ಮುನ್ನ ಕರ್ನಾಟಕದ ಕೋಲಾರನಲ್ಲಿ ನಡೆದ ರ್ಯಾಲಿಯಲ್ಲಿ ಮೋದಿ ಉಪನಾಮ ಹೊಂದಿರುವ ಜನರ ಬಗ್ಗೆ ಯಾವುದೇ ಮಾನಹಾನಿಕರ ಹೇಳಿಕೆ ನೀಡಿರುವುದನ್ನು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ.
ಮೋದಿ ಉಪನಾಮ ಹೊಂದಿರುವ ಎಲ್ಲ ಜನರು ಕಳ್ಳರು ಎಂದು ಅವರು ಹೇಳಿದ್ದಾರೆಯೇ ಎಂದು ನ್ಯಾಯಾಲಯ ಕೇಳಿದಾಗ, ತಾನು ಎಂದಿಗೂ ಅಂತಹ ಮಾತುಗಳನ್ನು ಹೇಳಲಿಲ್ಲ ಎಂದು ಗಾಂಧಿ ಹೇಳಿದ್ದಾರೆ. ಇದಕ್ಕೂ ಮೊದಲು ರಾಹುಲ್ ಗಾಂಧಿ 2019ರ ಅಕ್ಟೋಬರ್‌ನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಮಾನನಷ್ಟಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ಶಾಸಕ ಪೂರ್ಣೇಶ್ ಮೋದಿ ಅವರು 2019ರ ಏಪ್ರಿಲ್‌ನಲ್ಲಿ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು. "ಎಲ್ಲಾ ಕಳ್ಳರು ಮೋದಿ ಎಂಬ ಸಾಮಾನ್ಯ ಉಪನಾಮವಾಗಿ ಹೇಗೆ ಹೊಂದಿದ್ದಾರೆ?" ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಇಡೀ ಮೋದಿ ಸಮುದಾಯವನ್ನು ದೂಷಿಸಿದ್ದಾರೆ ಎಂದು ಶಾಸಕರು ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಘಟನೆ ಹಿನ್ನೆಲೆ:
2019ರ ಏಪ್ರಿಲ್ 13ರಂದು ಕೋಲಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ, “ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ... ಅವರೆಲ್ಲರೂ ಮೋದಿ ಎಂಬ ಸಾಮಾನ್ಯ ಉಪನಾಮವಾಗಿ ಹೇಗೆ ಹೊಂದಿದ್ದಾರೆ? ಎಲ್ಲಾ ಕಳ್ಳರು ಮೋದಿ ಎಂಬ ಉಪನಾಮ ಹೇಗೆ ಹೊಂದಿದ್ದಾರೆ” ಎಂದು ರಾಹುಲ್ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದ ಸಾಕ್ಷಿಗಳಾಗಿ ಕೋಲಾರ ಜಿಲ್ಲಾಧಿಕಾರಿ ಮತ್ತು ಭಾಷಣವನ್ನು ಧ್ವನಿಮುದ್ರಿಸಿದ ವಿಡಿಯೋಗ್ರಾಫರನ್ನು ವಿಚಾರಣೆಗೆ ಕರೆಸಬೇಕೆಂದು ಕೋರಿ ಪೂರ್ಣೇಶ್ ಮೋದಿ ಗುಜರಾತ್ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಹೈಕೋರ್ಟ್ ಈ ವಿಷಯವನ್ನು ಸೋಮವಾರ ಆಲಿಸುವ ನಿರೀಕ್ಷೆಯಿದೆ.