ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಬರಗಾಲದ ಆತಂಕ ಎದುರಾಗಿದೆ. ಇದರಿಂದಾಗಿ ಜಾನುವಾರುಗಳಿಗೆ ಆಹಾರ ಕೊರತೆ ಉಂಟಾಗಿದ್ದು, ಹಳ್ಳಿಗಳಲ್ಲೇ ಹೈನುಗಾರಿಕೆ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇಲ್ಲೊಬ್ಬ ಹೈನೋದ್ಯಮಿ ನಗರ ಪ್ರದೇಶದಲ್ಲಿ ಹೈನುಗಾರಿಕೆ ಕೈಗೊಂಡು ಅದರಲ್ಲಿ ಯಶಸ್ಸು ಕೂಡ ಕಂಡಿದ್ದಾರೆ.
ಸುಮಾರು ವರ್ಷಗಳಿಂದ ಹೈನುಗಾರಿಕೆ ಮಾಡಿಕೊಂಡಿರುವ ಹೈನೋದ್ಯಮಿಯೇ 37 ವರ್ಷದ ಸುದೀಂದ್ರ. ತಾತನ ಕಾಲದಿಂದಲೂ ಇವರ ಕುಟುಂಬ ಪಶುಸಂಗೋಪನೆಯನ್ನೇ ವೃತ್ತಿಯಾಗಿಸಿಕೊಂಡು ಬಂದಿದ್ದು, ತಾತ ಹಾಗೂ ತಂದೆಯ ನಂತರ ಸುದೀಂದ್ರ ಅವರೇ ಹಸುಗಳ ಪಾಲನೆ ಮುಂದುವರಿಸಿಕೊಂಡು ಪಶುಸಂಗೋಪನೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಬೆಂಗಳೂರಿನ ಸಜ್ಜನ್ ರಾವ್ ವೃತ್ತದಲ್ಲಿ ಸುದೀಂದ್ರ ಕುಟುಂಬ ವಾಸವಾಗಿದ್ದು, ಮನೆಯ ಪಕ್ಕದಲ್ಲೇ ಸುಮಾರು 45 ಹಸುಗಳು ,ನಾಲ್ಕು ಮುರ್ರಾ ಎಮ್ಮೆ, ಎರಡು ಹೋರಿ ,ಹಾಗೂ ನಾಲ್ಕು ಕರು ಸಾಕಿದ್ದಾರೆ. ನಿತ್ಯ ಐನೂರಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದಿಸುವ ಸುದೀಂದ್ರ ಯಾವುದೇ ಡೈರಿಗೆ ಹಾಲು ಹಾಕುವುದಿಲ್ಲ. ಬದಲಾಗಿ ಅವರ ಏರಿಯಾದಲ್ಲೇ ಇರುವ ಮನೆಗಳಿಗೆ ನಿತ್ಯ ಹಾಲು ಮಾರಾಟ ಮಾಡುತ್ತಾರೆ.
ಹಾಲು ಉತ್ಪಾದನೆಯನ್ನೇ ಜೀವನಾಧಾರವಾಗಿಸಿಕೊಂಡ ಕುಟುಂಬ
ಇವರು ಸಾಕಿರುವ ಮುರ್ರಾ ಎಮ್ಮೆಯ ಹಾಲಿಗೆ ಸಖತ್ ಬೇಡಿಕೆ ಇದ್ದು ಒಂದು ಲೀಟರ್ ಹಾಲಿಗೆ 150 ರೂ ಕೊಟ್ಟು ಗ್ರಾಹಕರು ತೆಗೆದು ಕೊಂಡು ಹೋಗ್ತಾರೆ ಎನ್ನುತ್ತಾರೆ ಸುದೀಂದ್ರ. ಹಾಗೆಯೇ ಅವುಗಳ ಲಾಲನೆ ಪಾಲನೆ ಕುರಿತು ಮಾತನಾಡಿದ ಸುದೀಂದ್ರ ನಾನು ಹಾಸನದಿಂದ ಗೋವುಗಳಿಗೆ ಮೇವು ತರಿಸುತ್ತೇನೆ. ಹಾಗೂ ಡೈರಿ ಫೀಡ್ಸ್ ಹಾಕುತ್ತೀನಿ ಎಂದು ಹೇಳಿದ್ದಾರೆ . ನಾನು ಹಸುವಾಗಲಿ ಕರುವಾಗಲಿ ಮಾರಾಟ ಮಾಡುವುದಿಲ್ಲ. ಬದಲಿಗೆ ವಯಸ್ಸಾದ ಹಸುಗಳನ್ನು ಗೋಶಾಲೆಗೆ ಬಿಟ್ಟು ಬರುತ್ತೇನೆ ಎಂದಿದ್ದಾರೆ. ಹಸುಗಳನ್ನ ಸಾಕಿರುವ ಯಾರೇ ಆಗಲಿ ಹಾಳಾಗಲ್ಲ. ನಾವು ಹಸುಗಳನ್ನು ಚೆನ್ನಾಗಿ ಪಾಲನೆ ಮಾಡಿದರೆ ಖಂಡಿತ ನಮಗೆ ಲಾಸ್ ಆಗಲ್ಲ ಎಂದು ಕಂಗೆಟ್ಟ ರೈತರಿಗೆ ಕಿವಿಮಾತು ಹೇಳಿದ್ದಾರೆ.
ಸುದೀಂದ್ರ ನಾನು ಮಾಲೀಕ ಎಂಬ ಭಾವನೆಯಲ್ಲಿ ಕೆಲಸಗಾರರ ಕೈಲಿ ಸಗಣಿ ಬಾಚಿಸಿ ಕೂತುಕೊಂಡು ಹಣ ಎಣಿಸುವುದಿಲ್ಲ. ಬದಲಿಗೆ ಅವರೂ ಕೂಡ ಹಸುಗಳ ಪಾಲನೆ ಮಾಡ್ತಾರೆ. ಹಾಲು ಕರಿತಾರೆ. ನಿತ್ಯ ಹಾಲು ಮಾರಾಟ ಮಾಡಲು ಎಂಟು ಹುಡುಗರನ್ನು ನೇಮಿಸಿದ್ದಾರೆ. ಗೋ ಪಾಲನೆಗೆ ಅಂತಾನೇ ನಾಲ್ಕು ಜನ ನೇಮಕ ಮಾಡಿಕೊಂಡು ಅವರ ಜೊತೆ ಸುದೀಂದ್ರ ಅವರು ಸರಿಸಮಾನವಾಗಿ ಕೆಲಸ ಮಾಡ್ತಾರೆ.ಇದರ ಜೊತೆ ಎರಡು ಹೋರಿಗಳು ಇರುವುದರಿಂದ ಸುತ್ತ ಮುತ್ತ ಹಸು ಸಾಕಿರುವವರು ಸಹ ಕ್ರಾಸ್ ಮಾಡಿಸಲು ಬರುತ್ತಾರೆ. ಅಲ್ಲದೆ ಇದರಿಂದಲೂ ಸಹ ಸುಧೀಂದ್ರ ಅವರಿಗೆ ಲಾಭವಿದೆಯಂತೆ.. ಪ್ರತಿ ನಿತ್ಯ ಹಸುಗಳ ಮೈ ತೊಳೆದು ಅವುಗಳು ಮಲಗಲು ಕೊಟ್ಟಿಗೆ ಯಲ್ಲಿ ಎಲ್ಲಾ ಹಸುಗಳಿಗೂ ಮ್ಯಾಟ್ ಹಾಕಿದ್ದಾರೆ.
ಪ್ರಸ್ತುತ ವಿದ್ಯಮಾನದಲ್ಲಿ ಹಳ್ಳಿ ಪ್ರದೇಶಗಳಲ್ಲಿ ರೈತರು ಜೀವನ ನಡೆಸುವುದೇ ಕಷ್ಟ ಎಂದು ಹಳ್ಳಿಗಳಲ್ಲಿ ಹೈನುಗಾರಿಕೆ ಮಾಡಲಾಗದೇ ಪಟ್ಟಣಗಳಿಗೆ ಗುಳೆ ಹೋಗುತ್ತಿರುವ ಇಂದಿನ ಪೀಳಿಗೆಯ ಜನರ ನಡುವೆ, ಸ್ವಂತ ಮಕ್ಕಳ ಹಾಗೇ ಹಸು -ಕರುಗಳನ್ನು ಸಾಕಿ ಸಲುಹಿ, ಅದರಲ್ಲೇ ಹೆಚ್ಚು ಆದಾಯ ಗಳಿಸಿ ಯಶ್ಸು ಕಂಡಿರುವ ಸುದೀಂದ್ರ ನಿಜಕ್ಕೂ ಮಾದರಿ ಹೈನೋದ್ಯಮಿ ಎಂದರೆ ತಪ್ಪಾಗಲಾರದು.