ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಮದಿರೆ ಗ್ರಾಮದ ಒಂದೇ ಕುಟುಂಬದ ಗಂಡ-ಹೆಂಡತಿ ಮತ್ತು ಮಗಳು ಮಹಾಮಾರಿ COVID ಸೋಂಕಿಗೆ ಬಲಿಯಾಗಿದ್ದಾರೆ.
ಮದಿರೆ ಗ್ರಾಮದ ಸುನೀತಮ್ಮ (45), ರುದ್ರಪ್ಪ (56) ಹಾಗೂ ನಂದಿನಿ (18) ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮೊದಲು ಈ ಮಹಾಮಾರಿ ಕೊರೊನಾ ಸೋಂಕಿಗೆ ಒಳಗಾಗಿದ್ದ ದುದ್ರಪ್ಪ ಅವರ ಮಗ ತಿಪ್ಪೇಸ್ವಾಮಿ (22) ಗುಣಮುಖರಾಗಿದ್ದಾರೆ.
ಘಟನೆಯ ವಿವರ: ಹೈದರಾಬಾದ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ತಿಪ್ಪೇಸ್ವಾಮಿ (22) ಎರಡನೇ ಅಲೆಯ ಲಾಕ್ ಡೌನ್ ಘೋಷಣೆಯಾದ ಆರಂಭದಲ್ಲೇ ಮದಿರೆ ಗ್ರಾಮಕ್ಕೆ ಆಗಮಿಸಿದ್ದರು. ರೈತಾಪಿ ಕುಟುಂಬದ ಹಿನ್ನೆಲೆ ಹೊಂದಿದ್ದ ತಿಪ್ಪೇಸ್ವಾಮಿ ಅವರಿಗೆ COVID ಸೋಂಕು ತಗುಲಿತ್ತು. ಹೋಂ ಐಸೋಲೇಷನ್ನಲ್ಲಿದ್ದ ತಿಪ್ಪೇಸ್ವಾಮಿ ಅವರಿಂದ ಅತನ ತಾಯಿಯಾದ ಸುನೀತಮ್ಮಗೆ ಈ ಸೋಂಕು ಆವರಿಸಿತ್ತು. ಬಳಿಕ, ಆತನ ಸಹೋದರಿ ನಂದಿನಿ (18) ಅವರಿಗೆ COVID ಹಬ್ಬಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ಗೆ ಸ್ಥಳಾಂತರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರಿಬ್ಬರು ಸಾವನ್ನಪ್ಪಿದ್ದಾರೆ.
ಪತ್ನಿ ಹಾಗೂ ಮಗಳ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ತಿಪ್ಪೇಸ್ವಾಮಿಯವರ ತಂದೆ ರುದ್ರಪ್ಪ ಅವರಿಗೂ Corona ವಕ್ಕರಿಸಿತ್ತು. ಜಿಲ್ಲೆಯ ಕಂಪ್ಲಿಯ ಖಾಸಗಿ ಕೋವಿಡ್ ಕೇರ್ ಸೆಂಟರ್ನಲ್ಲಿ ದಾಖಲಾಗಿದ್ದ ರುದ್ರಪ್ಪ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇದೀಗ ಮನೆಯಲ್ಲಿ ಸೂತಕ ಆವರಿಸಿದೆ. ಒಂದೇ ಕುಟುಂಬದಲ್ಲಿ ಮೂವರು ಸಾವನ್ನಪ್ಪಿದ್ದನ್ನು ಕಂಡು ಜನರು ಮಮ್ಮಲ ಮರುಗಿದ್ದಾರೆ.