ನವದೆಹಲಿ: ದೆಹಲಿ ಸರ್ಕಾರವು ನಗರದ ಎಪ್ಪತ್ತೆರಡು ಲಕ್ಷ ಪಡಿತರ ಚೀಟಿದಾರರಿಗೆ ಮುಂದಿನ ಎರಡು ತಿಂಗಳವರೆಗೆ ಉಚಿತ ಪಡಿತರವನ್ನು ನೀಡುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಕಟಿಸಿದ್ದಾರೆ.
ಅಲ್ಲದೇ ಕೊರೊನಾದ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಜನರಿಗೆ ಸಹಾಯ ಮಾಡುತ್ತಿರುವ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಡ್ರೈವರ್‌ಗಳಿಗೆ ರೂ 5,000 ಧನಸಹಾಯವನ್ನು ಮಾಡುವುದಾಗಿ ತಿಳಿಸಿದ್ದಾರೆ.
ಕೋವಿಡ್ ಪ್ರಸರಣ ಸರಪಳಿ ಮುರಿಯಲು ರಾಷ್ಟ್ರ ರಾಜಧಾನಿಯಲ್ಲಿ ವಿಧಿಸಲಾದ ಲಾಕ್‌ಡೌನ್ ಇನ್ನೂ ಎರಡು ತಿಂಗಳವರೆಗೆ ಇರುತ್ತದೆ ಎಂದು ಇದರ ಅರ್ಥವಲ್ಲ. ದೆಹಲಿಯ ಪರಿಸ್ಥಿತಿ ಸುಧಾರಿಸುತ್ತದೆ. ಹಾಗಾಗಿ ಲಾಕ್ ಡೌನ್ ಅಗತ್ಯವಿಲ್ಲ ಎಂದು ಕೇಜ್ರಿವಾಲ್ ಆಶಿಸಿದ್ದಾರೆ.
ಕಳೆದ ವರ್ಷದ ಲಾಕ್‌ಡೌನ್ ಸಮಯದಲ್ಲಿ ದೆಹಲಿ ಸರ್ಕಾರವು 1.56 ಲಕ್ಷ ಆಟೋ ಮತ್ತು ಟ್ಯಾಕ್ಸಿ ಡ್ರೈವರ್‌ಗಳಿಗೆ ತಲಾ 5,000 ರೂ.ಗಳ ಆರ್ಥಿಕ ನೆರವು ನೀಡಿತ್ತು. ಈಗ ಅವರಿಗೆ ಮತ್ತೆ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರ ಮುಂದಡಿಯಿಟ್ಟಿದೆ ಎಂದರು.
ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಿಂದಾಗಿ ರಾಷ್ಟ್ರ ರಾಜಧಾನಿ ಮೇ 10 ರವರೆಗೆ ಲಾಕ್‌ಡೌನ್ ಆಗಿದೆ.