ಶಿವಮೊಗ್ಗ: ಕೊರೊನಾ ಪರಿಸ್ಥಿತಿ ನಿರ್ವಹಣೆ, ಸೋಂಕಿತರ ಪ್ರಾಣ ರಕ್ಷಣೆ, ಬೆಡ್, ಆಕ್ಸಿಜನ್, ವೆಂಟಿಲೇಟರ್ ಒದಗಿಸುವಲ್ಲಿ ವಿಫಲವಾಗಿರುವ ಹಾಗೂ ಬಡವರಿಗೆ ಪ್ಯಾಕೇಜ್ ಘೋಷಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ರಾಷ್ಟ್ರಪತಿಗಳು ವಜಾಗೊಳಿಸಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ದೇಶಾದ್ಯಂತ ಕೊರೊನಾ ಎರಡನೇ ಅಲೇ ವೇಗವಾಗಿ ಹರಡುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ, ಸೋಂಕಿತರ ಪ್ರಾಣ ರಕ್ಷಣೆ, ಆಕ್ಸಿಜನ್ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. 18 ವರ್ಷ ಮೀರಿದ ಎಲ್ಲರಿಗೂ ಲಸಿಕೆ ಹಾಕುವುದಾಗಿ ಪ್ರಧಾನಿ ಘೋಷಣೆ ಮಾಡಿದ್ದರು. ಆದರೆ, ಇಲ್ಲಿಯವರೆಗೂ ಲಸಿಕೆ ಸಿಕ್ಕಿಲ್ಲ. ರಾಜ್ಯದ ಬಡವರಿಗೆ, ಕಾರ್ಮಿಕರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡದಿರುವುದು ನೋಡಿದರೆ ಸರ್ಕಾರ ಜನರ ಮೇಲೆ ತೋರುತ್ತಿರುವ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂದು ಕಾರ್ಯಕರ್ತರು ದೂರಿದರು.
ಹಾಗಾಗಿ ಜನರ ರಕ್ಷಣೆಗೆ ಬಾರದ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ರಾಷ್ಟ್ರಪತಿಗಳು ವಜಾಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗಿದೆ.