ಬೆಂಗಳೂರು: ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿಯರ ವಿರುದ್ಧ ನಕಲಿ ಖಾತೆ ಸೃಷ್ಟಿಸಿ ಆ ಮೂಲಕ ಅವಹೇಳನ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶಾಸಕಿ ಸೌಮ್ಯಾರೆಡ್ಡಿ, ವಕ್ತಾರೆ ಭವ್ಯ ನರಸಿಂಹ ಮೂರ್ತಿ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಭವ್ಯ ನರಸಿಂಹ ಮೂರ್ತಿಗೆ ಬೆದರಿಕೆ ಕರೆಗಳು ಬರುತ್ತಿವೆ. ತೇಜೋವಧೆ ಮಾಡುವ 50 ಕರೆಗಳು ಬಂದಿವೆ. ಈ ಕರೆಗಳ ಬಗ್ಗೆ ಠಾಣೆಯಲ್ಲಿ ದೂರು ನೀಡಲಾಗಿದೆ. ಇದು ಒಬ್ಬ ಮಹಿಳೆ ಅಲ್ಲ ದೇಶದ ಮಹಿಳೆಯರ ಪ್ರಶ್ನೆ. ಇಂದು ರಾಜಕೀಯಕ್ಕೆ ಹೆಣ್ಣುಮಕ್ಕಳೇ ಬರುತ್ತಿಲ್ಲ. ಹೆಣ್ಣುಮಕ್ಕಳನ್ನ ಮನೆಯಿಂದ ಹೊರಗೆ ಕಳಿಸಲ್ಲ. ಅಂತಹ ಸನ್ನಿವೇಶದಲ್ಲಿ ಭವ್ಯ ಎದುರಿಸಿ ನಿಲ್ಲುತ್ತಾರೆ. ಸಮಾಜದಲ್ಲಿನ ತಪ್ಪನ್ನ ಎತ್ತಿ ಹಿಡಿಯುತ್ತಾರೆ. ಇನ್ನು ಬಿಂದು ಗೌಡ ವಿರುದ್ಧವೂ ತೇಜೋವಧೆ ಮಾಡ್ತಿದ್ದಾರೆ. ಸೋನಿಯಾ, ಪ್ರಿಯಾಂಕ ಗಾಂಧಿಯನ್ನೂ ಅವಹೇಳನ ಮಾಡ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಕಲಿ ಖಾತೆ ಸೃಷ್ಟಿಸುವ ಮೂಲಕ ತೇಜೋವಧೆ ಮಾಡ್ತಿದ್ದಾರೆ. ಇದರ ಹಿಂದಿರುವವರು ಯಾರು? ಅವರನ್ನ ಪತ್ತೆ ಹಚ್ಚೋಕೆ ಪೊಲೀಸರಿಗೆ ಸಾಧ್ಯವಾಗ್ತಿಲ್ವಾ? ಮಹಿಳೆಯರನ್ನ ಸಹಿಸದ ನಾಮರ್ಧರು ಯಾರು? ಅದು ಬಹಿರಂಗವಾಗಬೇಕು.
ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ
ಧೈರ್ಯವಿದ್ದರೆ ಬಹಿರಂಗ ಚರ್ಚೆಗೆ ಬನ್ನಿ. ನಿಮ್ಮ ಧ್ಯೇಯ ಸಿದ್ಧಾಂತಗಳ ಬಗ್ಗೆ ಚರ್ಚೆಗೆ ಬನ್ನಿ. ನನಗೂ ಇಂತಹ ತೇಜೋವಧೆ ಮಾಡಿದ್ದರು. ನಾನು ಮೈಸೂರಿನಲ್ಲಿ ಸುದ್ದಿಗೋಷ್ಠಿ ಮಾಡಿದ್ದೆ. ಆಗ ಇದರ ಹಿಂದೆ ಯುವರಾಜಕಾರಣಿಗಳಿದ್ದಾರೆ ಎನ್ನುವುದು ಗೊತ್ತಾಯ್ತು. ನಿಮ್ಮಲ್ಲಿ ಯಾರು ಹೆಣ್ಣು ಮಕ್ಕಳು ರಾಜಕಾರಣದಲ್ಲಿ ಇಲ್ವಾ? ಶೋಭಾ, ಶಶಿಕಲಾ ಜೊಲ್ಲೆ ಎಲ್ಲರೂ ಇಲ್ವಾ? ಯಾಕೆ ಅವರ ಬಗ್ಗೆ ಮಾತನಾಡಲ್ಲ. ಸರ್ಕಾರ ಜೀವಂತವಿದ್ದರೆ ತನಿಖೆ ಮಾಡಬೇಕು. ಇದರ ಹಿಂದಿರುವವರನ್ನ ಪತ್ತೆ ಹಚ್ಚಬೇಕು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದು ಇಲ್ಲಿನವರೇ ಮಾಡಿದ ಕೃತ್ಯ
ಕೆಪಿಸಿಸಿ ವಕ್ತಾರೆ ಭವ್ಯಾ ನರಸಿಂಹ ಮೂರ್ತಿ ಮಾತನಾಡಿ, ಜೂನ್ 9 ರಿಂದ ನನಗೆ ನಿರಂತರ ಕರೆಗಳು ಬರ್ತಿವೆ. ಕ್ರೈಂ ಬ್ರಾಂಚ್ಗೆ ದೂರು ಕೊಡಲು ಹೊರಟಿದ್ದೆ. ಆಗಲೂ ಕಾಲ್ ಬಂತು. ಪೊಲೀಸರಿಗೆ ನೀವೇ ಮಾತನಾಡಿ ಅಂತ ಕೊಟ್ಟೆ. ಸಿಮ್ಗಳು ಬೇರೆ ರಾಜ್ಯಗಳಲ್ಲಿ ರಿಜಿಸ್ಟ್ರೇಷನ್ ಆಗಿವೆ. ಸಿಮ್ ಬೇರೆ ಬೇರೆ ರಾಜ್ಯಗಳವು ಇರಬಹುದು. ಆದರೆ ಅವರು ಮಾತನಾಡೋದು ಕನ್ನಡದಲ್ಲೇ. ಹಾಗಾಗಿ ಇಲ್ಲಿಯವರೇ ಮಾಡ್ತಿರೋ ಕೆಲಸ ಎಂದರು.
ನಾನು ಕೆಪಿಸಿಸಿ ಮಾಧ್ಯಮ ವಕ್ತಾರೆ. ಫೇಸ್ಬುಕ್ನಲ್ಲಿ ವಿವರಣೆ ಕೊಡ್ತೇನೆ. ಅದಕ್ಕೆ ಕೆಲವರಿಗೆ ಸಹಿಸಲಾಗುತ್ತಿಲ್ಲ. ಕಳೆದ ವಾರ ಫೇಸ್ಬುಕ್ ಹ್ಯಾಕ್ ಮಾಡಿದ್ದರು. ದೂರು ಕೊಟ್ಟು ಅದನ್ನ ಸರಿಪಡಿಸಿಕೊಂಡೆ. ಆದರೆ ಪೊಲೀಸರಿಂದ ಯಾವುದೇ ರಿಪ್ಲೇ ಬರಲಿಲ್ಲ. ಪೊಲೀಸ್ ಆಯುಕ್ತರಿಗೂ ನಾನು ದೂರು ಸಲ್ಲಿಸಿದ್ದೇನೆ. ಡಿಸಿಪಿಯವರ ಬಳಿ ಹೋಗಿದ್ದೆ. ನಮ್ಮ ವ್ಯಾಪ್ತಿಗೆ ನಿಮ್ಮಕೇಸ್ ಬರಲ್ಲ ಅಂತ ವಾಪಸ್ ಕಳುಹಿಸಿದ್ರು. ನನಗೆ ಮತ್ತೆ ಎರಡು ದಿನಗಳಿಂದ ಕಾಲ್ ಬರುತ್ತಲೇ ಇವೆ. ಮತ್ತೆ ದೂರು ಕೊಡೋಕೆ ಹೋದ್ರೆ ನಮಗೇ ಪ್ರಶ್ನೆ ಕೇಳ್ತಾರೆ. ಇದೊಂದು ಸಂಯೋಜಿತ ಕೆಲಸ ಎಂದರು.
ಬೆದರಿಕೆ ಕರೆ ಬಂದಿರುವುದು ನಿಜ
ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಭವ್ಯಾಳಿಗೆ ಬೆದರಿಕೆ ಕಾಲ್ ಬಂದಿರುವುದು ಸತ್ಯ. ರಾಜ್ಯದಲ್ಲಿ ಶೇ.4 ರಷ್ಟು ಹೆಣ್ಣು ಮಕ್ಕಳು ರಾಜಕೀಯದಲ್ಲಿದ್ದಾರೆ. ದೇಶದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡ್ತಿದ್ದಾರೆ. ಇದನ್ನ ಗಂಭೀರವಾಗಿ ಸರ್ಕಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.