ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಚಿನ್ನದ ರಥ ನಿರ್ಮಿಸುವ ವಿಷಯ ಕುರಿತಂತೆ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ದೇಗುಲಕ್ಕೆ 15 ಕೋಟಿ ಅಂದಾಜು ವೆಚ್ಚದಲ್ಲಿ 240 ಕಿಲೋ ಚಿನ್ನದಿಂದ ರಥ ನಿರ್ಮಿಸಿಕೊಡುವ ಯೋಜನೆಯು 2005ರ ಆಗಸ್ಟ್ನಲ್ಲೇ ನಿರ್ಧಾರವಾಗಿತ್ತು ಎಂದು ಸಿಎಂ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.
ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಪ್ರಾರ್ಥಿಸಿ ಈ ಹರಕೆ ಕಟ್ಟಿಕೊಳ್ಳಲಾಗಿತ್ತು ಎಂಬ ಮಾಧ್ಯಮಗಳ ತರ್ಕ ಸತ್ಯಕ್ಕೆ ದೂರವಾದ ವಿಚಾರ ಎಂದೂ ಸ್ಪಷ್ಟಪಡಿಸಲಾಗಿದೆ.
ಸಂಬಂಧಿತ ಸುದ್ದಿ:
ಕುಕ್ಕೆ ರಥಕ್ಕೆ ಚಿನ್ನ ಲೇಪನ.. 85 ಕೋಟಿ ರೂ ವೆಚ್ಚ. ... ಹೆಚ್ಡಿಕೆಗೆ ನೆಟ್ಟಿಗರ ತರಾಟೆ
ಈ ಯೋಜನೆಗೆ ದೇವಾಲಯದಲ್ಲಿ ಲಭ್ಯವಿದ್ದ ಚಿನ್ನ ಬಳಸಿಕೊಂಡು ಉಳಿದ ಚಿನ್ನವನ್ನು ಬ್ಯಾಂಕಿನ ಮೂಲಕ ಖರೀದಿಸಲು ಅಂದು ಸರ್ಕಾರ ಅನುಮೋದನೆ ನೀಡಿತ್ತು. ಅಲ್ಲದೆ, ಸರ್ಕಾರದ ಅನುದಾನ ಬಳಸದೆ, ಸಾರ್ವಜನಿಕರ ದೇಣಿಗೆ ಸಂಗ್ರಹ ಹಾಗೂ ದೇವಾಲಯದ ಸಂಪನ್ಮೂಲಗಳಿಂದಲೇ ರಥ ನಿರ್ಮಾಣ ವೆಚ್ಚ ಭರಿಸುವಂತೆಯೂ ತಿಳಿಸಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.
ರಥ ನಿರ್ಮಾಣಕ್ಕೆ 2005ರಲ್ಲೇ ಟೆಂಡರ್ ಕರೆಯಲಾಗಿತ್ತು. ₹ 78,20,571 ಬಿಡ್ ಮೊತ್ತಕ್ಕೆ ಟೆಂಡರ್ ಅನುಮೋದಿಸಲು ಪ್ರಸ್ತಾವವನ್ನೂ ಸಲ್ಲಿಸಲಾಗಿತ್ತು ಆದ್ರೆ ಈ ಯೋಜನೆಗೆ ಚಾಲನೆ ಸಿಗಲಿಲ್ಲ ಎಂದು ಪ್ರಕಟಣೆ ಹೇಳಿದೆ.
ಇತ್ತೀಚೆಗೆ ಸಿಎಂ ಅವರು ದೇಗುಲಕ್ಕೆ ಭೇಟಿ ನೀಡಿದ್ದಾಗ ಯೋಜನೆಗೆ ಮರು ಚಾಲನೆ ನೀಡಬೇಕೆಂದು ಕೋರಿಕೊಂಡರು. ಪ್ರಸಕ್ತ ಚಿನ್ನದ ಮಾರುಕಟ್ಟೆ ದರವನ್ನು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.