ಕಲಬುರಗಿ: ಹೈದರಾಬಾದ್ ಕರ್ನಾಟಕದ ಭಾಗದ ಮಳೆನಾಡು ಎಂದೇ ಕರೆಯಲ್ಪಡುವ ಚಿಂಚೋಳಿಯಲ್ಲಿ ಇದೀಗ ಎತ್ತ ನೋಡಿದರು ಚುನಾವಣೆ ಮಾತುಗಳೇ ಕೇಳಿಬರುತ್ತಿವೆ. ಏಕೆಂದರೆ ಈಗ ಚಿಂಚೋಳಿ ವಿಧಾನಸಭಾ (ಪರಿಶಿಷ್ಟ ಜಾತಿ) ಮೀಸಲು ಕ್ಷೇತ್ರಕ್ಕೆ ಉಪ ಚುನಾವಣೆ ಕಾವು ಜೋರಾಗಿದೆ. ಮೇ 19ಕ್ಕೆ ಮತದಾನ ನಡೆಯಲಿದ್ದು, ಒಟ್ಟು 1,93,877 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಇಲ್ಲಿಯವರೆಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಹಿನ್ನೋಟದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.
ಹೇರಳ ಅರಣ್ಯ ಸಂಪತ್ತು, ವನ್ಯಜೀವಿಗಳ ತಾಣ, ಆಣೆಕಟ್ಟುಗಳು, ಕಿರು ಜಲಪಾತಗಳು, ಹೀಗೆ ಪ್ರವಾಸಿಗರ ಕಣ್ಮನ ಸೆಳೆಯುವ ಪ್ರವಾಸಿ ಸ್ಥಳಗಳಿಂದಲೆ ಆಕರ್ಷಿಸುವ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕು ತೆಲಂಗಾಣ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಗಡಿ ತಾಲೂಕು.
ಪ್ರಾಣಿಗಳ ಸಂಕುಲಕ್ಕೆ ಪೂರಕವಾಗಿ ಸುಮಾರು 14.958 ಹೆಕ್ಟೇರ್ ವಿಸ್ತೀರ್ಣದ ದಟ್ಟವಾದ ಕಾಡು ಹೊಂದಿರುವ ಕುಂಚಾವರಂ ಅರಣ್ಯ ಪ್ರದೇಶವನ್ನು ಸರ್ಕಾರ ವನ್ಯಜೀವಿ ಧಾಮ ಎಂದು ಘೋಷಿಸಿದೆ.
ತಾಲೂಕಿನಲ್ಲಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಚಂದ್ರಂಪಳ್ಳಿ ಆಣೆಕಟ್ಟು, ಅದಕ್ಕೆ ಸುತ್ತುವರಿದ ಅರಣ್ಯ ಪ್ರದೇಶ ನೋಡಿದರೆ ನೈಸರ್ಗಿಕ ಸೊಬಗನ್ನು ಸವಿದಂತಾಗುತ್ತದೆ. ಎತ್ತಿಪೋತಾ ಮತ್ತು ಗೊಟ್ಟಮಗೊಟ್ಟ ಜಲಪಾತಗಳು, ಸುಕ್ಷೇತ್ರ ಬುಗ್ಗಿ, ನಾಗರಾಳ ಮತ್ತು ಮುಲ್ಲಾಮರಿ ಆಣೆಕಟ್ಟುಗಳು ತಾಲೂಕಿನ ಇತರ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳಿಂದಾಗಿಯೇ ರಾಜ್ಯದ ಗಮನ ಸೆಳೆದಿದ್ದ ಚಿಂಚೋಳಿ ತಾಲೂಕು ಇದೀಗ ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್ ರಾಜೀನಾಮೆ ನೀಡಿದ ಕಾರಣ ಉಪಚುನಾವಣೆ ನಡೆಯುತ್ತಿರುವ ಹಿನ್ನಲೆ ಮತ್ತೊಮ್ಮೆ ರಾಜ್ಯದ ಜನರ ಗಮನ ಸೆಳೆದಿದೆ.
ಮೇ 19ಕ್ಕೆ ಉಪ ಚುನಾವಣೆಗೆ ಮತದಾನ ನಡೆಯಲಿದ್ದು, 99,047 ಪುರುಷ ಮತದಾರರು, 94,814 ಮಹಿಳಾ ಮತದಾರರು ಹಾಗೂ 16 ಇತರ ಮತದಾರರು ಸೇರಿದಂತೆ ಒಟ್ಟು 1,93,877 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಚಿಂಚೋಳಿ ಕ್ಷೇತ್ರಕ್ಕೆ ನಡೆದ ಚುನಾವಣೆ ಹಿನ್ನೋಟ:
ರಾಜ್ಯ ರಚನೆಯ ನಂತರ 1957ರಲ್ಲಿ ಪ್ರಥಮ ಬಾರಿಗೆ ನಡೆದ ಚಿಂಚೋಳಿ ವಿಧಾನಸಭಾ ಕ್ಷೇತಕ್ಕೆ ಒಟ್ಟು 49,473 ಪೈಕಿ 15,830 ಮತದಾರರು ಹಕ್ಕನ್ನು ಚಲಾಯಿಸಿದ್ದರು. ಕಾಂಗ್ರೆಸ್ನ ವೀರೇಂದ್ರ ಪಾಟೀಲ್ 9,539 ಮತಪಡೆದು ತಮ್ಮ ಪ್ರತಿಸ್ಪರ್ಧಿಗಿಂತ 3,248 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದರು.
1962ರಲ್ಲಿ ಕಾಂಗ್ರೆಸ್ ಪಕ್ಷದ ವೀರೇಂದ್ರ ಪಾಟೀಲ್ ಅವರು 13,391 ಮತಗಳನ್ನು ಪಡೆಯುವುದರ ಮೂಲಕ
3,038 ಮತಗಳ ಅಂತರದಲ್ಲಿ ಮರು ಆಯ್ಕೆಯಾದರು. ಈ ಚುನಾವಣೆಯಲ್ಲಿ ಒಟ್ಟು 57,980 ಪೈಕಿ 24,591 ಮತದಾರರು ಮತ ಚಲಾಯಿಸಿದರು.
1967ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ವೀರೇಂದ್ರ ಪಾಟೀಲ್ ಸತತವಾಗಿ ಮೂರನೇ ಬಾರಿಗೆ 31,030 ಮತಗಳನ್ನು ಪಡೆದು 3,617 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ಒಟ್ಟು 62,199 ಪೈಕಿ 37,091 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರು.
1972ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರಪ್ಪ ಘಾಳಪ್ಪ 24,364 ಮತ ಪಡೆದು 9,042 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಒಟ್ಟು 75,584 ಪೈಕಿ 47,177 ಮತದಾರರು ಮತ ಚಲಾವಣೆ ಮಾಡಿದ್ದರು.
1978ರಲ್ಲಿ ಕಾಂಗ್ರೆಸ್ ನ ದೇವೇಂದ್ರಪ್ಪ ಘಾಳಪ್ಪ 25,963 ಮತ ಪಡೆದು 6,455 ಮತಗಳ ಅಂತರದಲ್ಲಿ ಜಯ ಸಾಧಿಸಿದರು. ಒಟ್ಟು 77,266 ಪೈಕಿ 52,192 ಮತದಾರರು ಮತ ಚಲಾವಣೆ ಮಾಡಿದ್ದರು.
1983ರಲ್ಲಿ ಕಾಂಗ್ರೆಸ್ ನ ದೇವೇಂದ್ರಪ್ಪ ಘಾಳಪ್ಪ 19,513 ಮತ ಪಡೆದು ಕೇವಲ 88 ಮತಗಳ ಅಂತರದಲ್ಲಿ ಗೆಲುವಿನ ನಗೆ ಬಿರುವ ಮೂಲಕ ಸತತ ಮೂರನೆ ಬಾರಿಗೆ ಆಯ್ಕೆಯಾಗಿದ್ದರು. ಒಟ್ಟು 85,493 ಪೈಕಿ 52,211 ಮತದಾರರು ಮತ ಚಲಾಯಿಸಿದ್ದರು.
1985ರಲ್ಲಿ ಕಾಂಗ್ರೆಸ್ನ ವೀರಯ್ಯ ಸ್ವಾಮಿ 20,387 ಮತ ಪಡೆದು1,540 ಮತ ಅಂತರದಲ್ಲಿ ಜಯಭೇರಿ ಬಾರಿಸಿದ್ದರು. ಒಟ್ಟು 93,067 ಪೈಕಿ 44,925 ಮತದಾರರು ಮತ ಚಲಾಯಿಸಿದ್ದರು.
1989ರಲ್ಲಿ ಕಾಂಗ್ರೆಸ್ ನಿಂದ ವೀರೇಂದ್ರ ಪಾಟೀಲ್ 29,762 ಮತ ಪಡೆದು 2,045 ಮತಗಳ ಅಂತರದಲ್ಲಿ ಜಯಮಾಲೆ ಧರಿಸಿದ್ದರು. ಒಟ್ಟು 1,15,945 ಪೈಕಿ 77,923 ಮತದಾರರು ಮತ ಚಲಾವಣೆ ಮಾಡಿದ್ದರು.
1994ರಲ್ಲಿ ಮೊದಲಬಾರಿಗೆ ಕ್ಷೇತ್ರದಲ್ಲಿ ಜನತಾದಳ ಪಕ್ಷದಿಂದ ಸ್ಪರ್ಧಿಸಿದ ವೈಜನಾಥ ಪಾಟೀಲ್ 56,371 ಮತಗಳನ್ನು ಪಡೆದು 39,051 ಮತಗಳ ಭಾರೀ ಅಂತರದಿಂದ ಜಯ ಸಾಧಿಸಿದರು. ಒಟ್ಟು 1,25,831 ಪೈಕಿ 83,624 ಮತದಾರರು ಮತ ಚಲಾಯಿಸಿದರು.
1999ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಕೈಲಾಸನಾಥ ಪಾಟೀಲ್ 42,814 ಮತಗಳನ್ನು ಪಡೆದು 26,263 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಒಟ್ಟು 1,37,672 ಪೈಕಿ 86,635 ಮತದಾರರು ಮತ ಚಲಾಯಿಸಿದರು.
2004ರಲ್ಲಿ ಜನತಾದಳ ಎರಡನೇ ಬಾರಿಗೆ ಅಕೌಂಟ್ ತೆರೆದಿತ್ತು. ಅಭ್ಯರ್ಥಿ ವೈಜನಾಥ ಪಾಟೀಲ್ 36,184 ಮತಗಳನ್ನು ಪಡೆದು 5,117 ಮತಗಳ ಅಂತರದಲ್ಲಿ ಜಯ ಸಾಧಿಸಿದರು. ಒಟ್ಟು 1,56,293 ಪೈಕಿ 92,620 ಮತದಾರರು ಮತ ಚಲಾಯಿಸಿದರು.
ಕ್ಷೇತ್ರ ಪುನರ್ವಿಂಗಡನೆಯಲ್ಲಿ ಚಿಂಚೋಳಿ ವಿಧಾನಸಭಾ ಕ್ಷೇತ್ರವನ್ನು ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರವಾಗಿ ಮಾರ್ಪಾಡು ಮಾಡಲಾಯಿತು. ಆ ಬಳಿಕ 2008ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲನೇ ಬಾರಿಗೆ ಬಿಜೆಪಿ ಪಕ್ಷ ಗೆಲವು ಸಾಧಿಸಿತ್ತು. ಬಿಜೆಪಿಯ ಸುನೀಲ್ ವಲ್ಯಾಪುರೆ 35,491 ಮತಗಳನ್ನು ಪಡೆದು ಜಯ ಸಾಧಿಸಿದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಾಬುರಾವ ಚವ್ಹಾಣ ಅವರು 28,580 ಮತಗಳನ್ನು ಪಡೆದರು. ಗೆಲುವಿನ ಅಂತರ 6,911 ಆಗಿತ್ತು. ಈ ಚುನಾವಣೆಯಲ್ಲಿ ಒಟ್ಟು 1,56,064 ಪೈಕಿ 84,295 ಮತದಾರರು ಹಕ್ಕು ಚಲಾವಣೆ ಮಾಡಿದ್ದರು.
2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಡಾ. ಉಮೇಶ ಜಾಧವ್ 58,599 ಮತಗಳನ್ನು ಪಡೆದು ಜಯಸಾಧಿಸಿದರು. ಪ್ರತಿಸ್ಪರ್ಧಿ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಸುನೀಲ್ ವಲ್ಯಾಪುರೆ 32,539 ಮತಗಳನ್ನು ಪಡೆದುಕೊಂಡಿದ್ದರು. ಇಲ್ಲಿ ಗೆಲುವಿನ ಅಂತರ 26,060 ಆಗಿತ್ತು. ಈ ಚುನಾವಣೆಯಲ್ಲಿ ಒಟ್ಟು 1,69,292 ಪೈಕಿ 1,12,983 ಮತದಾರರು ವೋಟಿಂಗ್ ಮಾಡಿದ್ದರು
2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಡಾ. ಉಮೇಶ ಜಾಧವ 73,905 ಮತಗಳನ್ನು ಪಡೆದು ಎರಡನೇ ಬಾರಿಗೆ ಮರು ಆಯ್ಕೆಗೊಂಡರು.
ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅವರು 54,693 ಮತಗಳನ್ನು ಪಡೆದುಕೊಂಡಿದ್ದರು. ಇಲ್ಲಿ ಗೆಲುವಿನ ಅಂತರ 19,212 ಆಗಿತ್ತು. ಈ ಚುನಾವಣೆಯಲ್ಲಿ ಒಟ್ಟು 1,93,590 ಪೈಕಿ 1,32,557 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರು.
ಆದರೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ಉಮೇಶ ಜಾಧವ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಇದೀಗ ಉಪ ಚುನಾವಣೆ ನಡೆಯುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಸುಭಾಷ್ ರಾಠೋಡ್ ಕಣದಲ್ಲಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿ ಉಮೇಶ ಜಾಧವ್ ಅವರ ಪುತ್ರ ಅವಿನಾಶ ಜಾಧವ್ ಕಣದಲ್ಲಿದ್ದಾರೆ. ಈ ಬಾರಿ 99,047 ಪುರುಷ ಮತದಾರರು, 94,814 ಮಹಿಳಾ ಮತದಾರರು ಹಾಗೂ 16 ಇತರ ಮತದಾರರು ಸೇರಿದಂತೆ ಒಟ್ಟು 1,93,877 ಮತದಾರರು ಮತಚಲಾವಣೆ ಮಾಡಲಿದ್ದಾರೆ. ಹಿಂದಿನ ಸಂಪೂರ್ಣ ಇತಿಹಾಸ ನೋಡಿದರೆ ಚಿಂಚೋಳಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೊಟೆಯಾಗಿದ್ದು, ಈ ಬಾರಿ ಯಾರ ಮಡಲಿಗೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆ ಎಂಬುದನ್ನು ತಿಳಿಯಲು ಮೇ 23 ರವರೆಗೂ ಕಾಯಲೇಬೇಕು.