ವಿಶಾಖಪಟ್ಟಣ: 12ನೇ ಆವೃತ್ತಿಯ ಐಪಿಎಲ್ನಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ವಿರುದ್ದ ಗೆದ್ದು ಫೈನಲ್ ತಲುಪಿದ್ದಲ್ಲದೆ ಐಪಿಎಲ್ನ 100ನೇ ಗೆಲುವು ಸಾಧಿಸಿತು.
ಸತತ 10ನೇ ಸಲ ಪ್ಲೆ ಆಫ್ ತಲುಪಿದ ಸಾಧನೆ ಮಾಡಿದ್ದ ಐಪಿಎಲ್ನ ಪ್ರಬಲ ತಂಡವಾದ ಚೆನ್ನೈ ಶುಕ್ರವಾರ ನಡೆದ ಕ್ವಾಲಿಫೈಯರ್ನ 2ನೇ ಪಂದ್ಯದಲ್ಲಿ ಯುವ ಆಟಗಾರರ ತಂಡವಾದ ಡೆಲ್ಲಿ ಕ್ಯಾಪಿಟಲ್ ವಿರುದ್ಧ 6 ವಿಕೆಟ್ಗಳ ರೋಚಕ ಜಯ ಸಾಧಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ 100 ಜಯ ಕಂಡ 2ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಚೆನ್ನೈಗೂ ಮೊದಲು 3 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ನಲ್ಲಿ ಗೆಲುವಿನ ಶತಕ ಬಾರಿಸಿತ್ತು. ಇದೀಗ ಸಿಎಸ್ಕೆ 100 ನೇ ಗೆಲುವು ಪಡೆದ 2 ನೇ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕೆಕೆಆರ್ 92 ಹಾಗೂ ಆರ್ಸಿಬಿ 84 ಗೆಲುವು ಪಡೆದು ನಂತರದ ಸ್ಥಾನದಲ್ಲಿದೆ. ಮುಂಬೈ 186 ಪಂದ್ಯಗಳಲ್ಲಿ 108 ಜಯ ಸಾಧಿಸಿದ್ದರೆ, ಸಿಎಸ್ಕೆ 166 ಪಂದ್ಯಗಲ್ಲಿ 100 ಜಯ ಸಾಧಿಸಿದೆ.
ಒಟ್ಟು 10 ಆವೃತ್ತಿಗಳನ್ನಾಡಿರುವ ಚೆನ್ನೈ 8 ಬಾರಿ ಫೈನಲ್ ಪ್ರವೇಶ ಮಾಡಿದೆ. 2009 ಹಾಗೂ 2014ರಲ್ಲಿ ಮಾತ್ರ ಸೆಮಿಫೈನಲ್ನಲ್ಲೇ ಮುಗ್ಗರಿಸಿತ್ತು. ಇನ್ನು ಮುಂಬೈ ವಿರುದ್ಧ 4 ನೇ ಬಾರಿ ಫೈನಲ್ ಎದುರಿಸುತ್ತಿದೆ. ಹಿಂದಿನ 3 ಮುಖಾಮುಖಿಯಲ್ಲಿ 2 ಬಾರಿ ಮುಂಬೈ ಗೆದ್ದು ಚಾಂಪಿಯನ್ ಆಗಿದ್ದರೆ, ಒಮ್ಮೆ ಚೆನ್ನೈ ಚಾಂಪಿಯನ್ ಆಗಿದೆ. ಈ ಬಾರಿ ಯಾರೇ ಗೆದ್ದರು ಅವರಿಗೆ 4 ನೇ ಬಾರಿ ಚಾಂಪಿಯನ್ ಪಟ್ಟ ದೊರೆತಂತಾಗುತ್ತದೆ.