ಮೈಸೂರು: ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳು ಶೈಕ್ಷಣಿಕ ವಿಚಾರ ಬಿಟ್ಟು ಬೇರೆ ವಿಚಾರಗಳನ್ನು ಮಾಧ್ಯಮಗಳ ಜೊತೆ ಮಾತನಾಡಬಾರದು ಎಂದು ಆದೇಶಿಸಿರುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ವಿವಿ ಕುಲಪತಿಗಳು ಇನ್ನು ಮುಂದೆ ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂದು ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶದ ಬಗ್ಗೆ ಸ್ಪಷ್ಟೀಕರಣ ನೀಡಿದ ಸಚಿವರು, ಆ ರೀತಿಯ ಆದೇಶ ಹೊರಡಿಸಲಾಗಿಲ್ಲ. ಬದಲಾಗಿ ಕುಲಪತಿಗಳು ಶಿಕ್ಷಣದ ಬಗ್ಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಜ್ಞಾನವನ್ನು ತಿಳಿಸಿ ಬೋಧಿಸುವಂತಹ ವಿಚಾರಗಳನ್ನು ಪತ್ರಿಕೆಗಳಿಗೆ ಹಾಗೂ ಮಾಧ್ಯಮಗಳಿಗೆ ಮುಕ್ತವಾಗಿ ತಿಳಿಸಬಹುದು ಎಂದರು.
ಆದರೆ ಬೇರೆ ನೀತಿ ನಿಯಮಗಳನ್ನು ವಿವಿಯ ಆಂತರಿಕ ವಿಚಾರಗಳು ಹಾಗೂ ಕೆಲವು ಸೂಕ್ಷ್ಮ ವಿಚಾರಗಳನ್ನು ಮಾತನಾಡುವಾಗ ಸರ್ಕಾರದ ಅನುಮತಿ ಪಡೆದು ಹೇಳಿಕೆ ನೀಡಬೇಕೇ ವಿನಃ ನೇರವಾಗಿ, ಮುಕ್ತವಾಗಿ ಮಾಧ್ಯಮಗಳಿಗೆ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಆದೇಶ ಹೊರಡಿಸಲಾಗಿದೆ ಎಂದು ಅವರು ಹೇಳಿದ್ರು.
ಬೆಂಗಳೂರು ವಿವಿಯ ಗಲಾಟೆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಕೊಟ್ಟ ಹೇಳಿಕೆಗಳು ಯಾವ ರೀತಿ ತೊಂದರೆಯಾಯಿತು ಎಂಬ ಬಗ್ಗೆ ಸಚಿವರು ಉದಾಹರಣೆ ಸಮೇತ ವಿವರಿಸಿದರು. ಹಾಗಾಗಿ ಸರ್ಕಾರದ ಗಮನಕ್ಕೆ ತಂದು ಹೇಳಿಕೆ ನೀಡಲು ಸೂಚಿಸಲಾಗಿದೆ ಎಂದು ಸಚಿವ ಜಿ ಟಿ ದೇವೇಗೌಡ ಸ್ಪಷ್ಟಪಡಿಸಿದರು.