ಮೈಸೂರು: ಯುವತಿಯನ್ನು ಪ್ರೀತಿಸಿ ವಿವಾಹವಾದ ಯುವಕನೋರ್ವ ಒಂದೇ ದಿನದಲ್ಲಿ ಆಕೆಗೆ ವರದಕ್ಷಿಣೆ ತರುವಂತೆ ಮನೆಯಿಂದ ಹೊರ ಅಟ್ಟಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಮನೋಜ್ ಹಾಗೂ ಯುವತಿ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಪೋಷಕರು ಇವರಿಬ್ಬ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಫೆ.7ರಂದು ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಮಾರನೇ ದಿನವೇ ವರಸೆ ಬದಲಾಯಿಸಿದ ಮನೋಜ್, ನಾನು ನಿನ್ನನ್ನು ಸುಮ್ಮನೆ ಮದುವೆಯಾಗಿದ್ದೀನಿ. ಸಂಸಾರ ಮಾಡಬೇಕಾದರೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಯುವತಿಯನ್ನು ಮನೆಯಿಂದ ಹೊರಹಾಕಿದ್ದಾನೆ.
ಮನೋಜ್ ವಿರುದ್ಧ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದಾಗ, ಯುವಕನನ್ನು ಕರೆಸಿಕೊಂಡು ಪೊಲೀಸರು ಬುದ್ಧಿ ಹೇಳಿದ್ದರಂತೆ. ಆದರೆ ಇದಕ್ಕೂ ಬಗ್ಗದ ಈತ ವರದಕ್ಷಿಣೆ ತೆಗೆದುಕೊಂಡು ಮನೆಗೆ ಬಾ, ಇಲ್ಲವಾದರೆ ಬೇರೆ ದಾರಿ ನೋಡಿಕೊ ಎಂದು ಹೇಳಿದ್ದಾನಂತೆ. ಇದರಿಂದ ಕಂಗಲಾದ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.