ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳು ವಿಪಕ್ಷಗಳ ನಿದ್ದೆಗೆಡಿಸಿದ್ದು ಬಿಜೆಪಿಯನ್ನು ಹೊರಗಿಟ್ಟು ಸರ್ಕಾರ ರಚಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿವೆ.
ಪ್ರಾದೇಶಿಕ ಪಕ್ಷವನ್ನು ಮುನ್ನೆಲೆಗೆ ತಂದು ದೆಹಲಿ ರಾಜಕಾರಣದಲ್ಲಿ ಮಿಂಚಲು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಫಲಿತಾಂಶಕ್ಕೆ ಇನ್ನೇನು ಎರಡು ದಿನ ಬಾಕಿ ಇರುವಂತೆ ನಾಯ್ಡು ದೆಹಲಿಯಲ್ಲಿ ಓಡಾಟ ಹೆಚ್ಚಿಸಿದ್ದಾರೆ.
ವಿಪಕ್ಷಗಳಿಂದ ಆಯೋಗದ ಭೇಟಿ:
ವಿಪಕ್ಷಗಳೆಲ್ಲಾ ಒಟ್ಟಾಗಿ ಇಂದು ಚುನಾವಣಾ ಆಯೋಗವನ್ನು ಭೇಟಿ ಮಾಡಲಿದ್ದು, ವಿವಿಪ್ಯಾಟ್ ಹಾಗೂ ಇವಿಎಂ ಹೋಲಿಕೆಯಲ್ಲಿ ಉದ್ಭವಿಸಬಹುದಾದ ಸಮಸ್ಯೆಯನ್ನು ಮನವರಿಕೆ ಮಾಡಿಸಲಿವೆ. ಅಭಿಷೇಕ್ ಮನು ಸಿಂಘ್ವಿ ಹಾಗೂ ಅಹ್ಮದ್ ಪಟೇಲ್ ಕಾಂಗ್ರೆಸ್ ಪ್ರತಿನಿಧಿಸಿದರೆ, ಆಪ್ ಪರವಾಗಿ ಸಂಜಯ್ ಸಿಂಗ್, ಡಿ.ರಾಜಾ ಸಿಪಿಐನಿಂದ, ಸೀತಾರಾಮ್ ಯೆಚೂರಿ ಸಿಪಿಎಂನಿಂದ, ಟಿಡಿಪಿಯಿಂದ ಚಂದ್ರಬಾಬು ನಾಯ್ಡು, ಟಿಎಂಸಿಯಿಮದ ಡೆರೆಕ್ ಒಬ್ರಿಯಾನ್ ಹಾಗೂ ಟಿ.ಕೆ.ಎಸ್.ಇಳಂಗೋವನ್ ಡಿಎಂಕೆ ಪರವಾಗಿ ಆಯೋಗವನ್ನು ಭೇಟಿ ಮಾಡಲಿದ್ದಾರೆ.
ಎನ್ಡಿಎ ನಾಯಕರಿಗೆ ಭರ್ಜರಿ ಡಿನ್ನರ್:
ಪ್ರತಿಪಕ್ಷಗಳು ಮಹಾಫಲಿತಾಂಶದ ಟೆನ್ಷನ್ನಲ್ಲಿದ್ದರೆ ಇತ್ತ ಎನ್ಡಿಎ ಮೈತ್ರಿಕೂಟ ಸಮೀಕ್ಷೆಗಳಿಂದ ಕೊಂಚ ರಿಲ್ಯಾಕ್ಸ್ ಮೂಡ್ಗೆ ಜಾರಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಎನ್ಡಿಎ ಪ್ರಮುಖರಿಗೆ ಭರ್ಜರಿ ಔತಣಕೂಟವನ್ನು ಏರ್ಪಡಿಸಿದ್ದಾರೆ.
ಈ ಪಾರ್ಟಿಯಲ್ಲಿ ಪ್ರಧಾನಿ ಮೋದಿ, ಜೆಡಿಯು ನಾಯಕ ನಿತೀಶ್ ಕುಮಾರ್, ಶಿವಸೇನೆಯ ಉದ್ಧವ್ ಠಾಕ್ರೆ, ಎಲ್ಜೆಪಿ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಭಾಗವಹಿಸುವ ಪ್ರಮುಖ ನಾಯಕರು. ಈ ಔತಣಕೂಟಕ್ಕೂ ಮುನ್ನ ಪ್ರಮುಖ ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವರ ಸಭೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ.