ಚಿಕ್ಕಬಳ್ಳಾಪುರ: ಆಲೂಗಡ್ಡೆಯಲ್ಲಿ ಚಿಪ್ಸ್ ಹಾಗೂ ಪಲ್ಯವನ್ನು ಬಿಟ್ಟರೆ ಚಿನ್ನವನ್ನು ತಗೆಯಲು ಸಾಧ್ಯವಿಲ್ಲವೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕುರಿತು ಯಲಹಂಕ ಶಾಸಕ ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಗೌರಿಬಿದನೂರಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೂ ರಾಹುಲ್ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಗಾಂಧಿ ಹೆಸರನ್ನು ಇಟ್ಟುಕೊಂಡು ಕಾಂಗ್ರೆಸ್ನವರು ದೇಶವನ್ನು ನಿರ್ನಾಮ ಮಾಡುತ್ತಿದ್ದಾರೆ ಎಂದು ದೂರಿದರು.
ಇನ್ನು ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೂ ಯಾವುದೇ ಉಪಯೋಗ ಆಗಲಿಲ್ಲ. ಒಲಂಪಿಕ್ನಲ್ಲಿ ಪದಕಗಳನ್ನು ನೀಡುವಾಗ ಮೊದಲನೇ ಸ್ಥಾನ ಪಡೆದವರಿಗೆ ಚಿನ್ನ, ಎರಡನೇ ಸ್ಥಾನ ಪಡೆದವರಿಗೆ ಬೆಳ್ಳಿ, ಮೂರನೇ ಸ್ಥಾನ ಪಡೆದವರಿಗೆ ಕಂಚು ಕೊಡುತ್ತಾರೆ. ಆದರೆ ಕರ್ನಾಟಕದ ರಾಜಕೀಯದಲ್ಲಿ ಎಲ್ಲ ಉಲ್ಟಾ ಆಗಿದೆ. ಮೂರನೇ ಸ್ಥಾನ ಪಡೆದವರಿಗೆ ಸಿಎಂ ಹುದ್ದೆ, ಎರಡನೇ ಸ್ಥಾನದವರಿಗೆ ಡಿಸಿಎಂ ಹುದ್ದೆ, ಮೊದಲನೇ ಸ್ಥಾನಕ್ಕೆ ಪ್ರತಿಪಕ್ಷ ಸ್ಥಾನವನ್ನು ನೀಡಿರುವುದು ವಿಪರ್ಯಾಸ ಅಂತಾ ಬಿಜೆಪಿ ಶಾಸಕ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ವಿಶ್ವನಾಥ್ ಅವರು ನಿಖಿಲ್ ಚಿತ್ರದ ಧ್ವನಿಸುರಳಿಯ ಸಂದರ್ಭದಲ್ಲಿ ಕುಮಾರಸ್ವಾಮಿ ಮಧ್ಯೆ ನಡೆದ ಸಂಭಾಷಣೆಯನ್ನು ಲೇವಡಿ ಮಾಡಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವನಾಥ್ ಭವಿಷ್ಯ ನುಡಿದರು.