ಬೆಳಗಾವಿ: ಮಹಾಮಾರಿ ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ನಾಳೆಯಿಂದ 14 ದಿನ ಕಠಿಣ ನಿರ್ಬಂಧ ಘೋಷಿಸುತ್ತಿದ್ದಂತೆ ಕುಂದಾನಗರಿ ಜನತೆ ದಿನಸಿ ಖರೀದಿಗೆ ಮುಗಿಬಿದ್ದಿದ್ದಾರೆ.
ಸಂಜೆ ವೇಳೆಗೆ ಮಾರುಕಟ್ಟೆಗಳೆಲ್ಲವೂ ಜನದಟ್ಟಣೆಯಿಂದ ಕೂಡಿತ್ತು. ನೆಹರು ನಗರದಲ್ಲಿರುವ ಡಿಮಾರ್ಟ್ ಮುಂದೆ ದಿನಸಿ ಖರೀದಿಗೆ ಜನರು ಸರದಿ ಸಾಲಿನಲ್ಲಿ ನಿಂತಿದ್ದರು. ಜನರನ್ನು ನಿಯಂತ್ರಿಸುವಲ್ಲಿ ಡಿ ಮಾರ್ಟ್ ಸಿಬ್ಬಂದಿ ಹೈರಾಣಾದರು.
ಲಾಕ್ಡೌನ್ ಘೋಷಣೆಯಿಂದ ಸ್ಥಳೀಯ ಕಿರಾಣಿ ಅಂಗಡಿಗಳಲ್ಲಿ ದರ ದುಪ್ಪಟ್ಟಾಗುವ ಸಾಧ್ಯತೆ ಇದೆ. ಹೀಗಾಗಿ ಇಂದೇ ದಿನಸಿ ಖರೀದಿಗೆ ಜನರು ಮುಂದಾಗಿದ್ದಾರೆ.
ಮಾರುಕಟ್ಟೆ ಪ್ರದೇಶಗಳಲ್ಲೂ ಜನದಟ್ಟಣೆ:
ಮಾರುಕಟ್ಟೆ ಪ್ರದೇಶಗಳಾದ ಖಡೇಬಜಾರ್, ಗಣಪತಿ ಗಲ್ಲಿ, ಸಮಾದೇವಿ ಗಲ್ಲಿಯಲ್ಲಿ ಜನರ ಓಡಾಡ ಹೆಚ್ಚಾಗಿತ್ತು. ತಮಗೆ ಬೇಕಾದ ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆಗೆ ದೌಡಾಯಿಸಿದ್ದಾರೆ. ಕೆಲವರು ಮಾಸ್ಕ್ ಧರಿಸಿದರೂ ಸಾಮಾಜಿಕ ಅಂತರ ಮರೆತು ಜನರು ಓಡಾಡುತ್ತಿದ್ದಾರೆ. ಹಣ್ಣು, ಕಿರಾಣಿ ವಸ್ತುಗಳನ್ನು ಖರೀದಿಸಿ ಜನರು ಮನೆಗೆ ತೆರಳುತ್ತಿದ್ದಾರೆ.
ಎರಡು ವಾರ ಲಾಕ್ಡೌನ್ ಇರುವ ಕಾರಣ ಮದ್ಯ ಪ್ರಿಯರು ವೈನ್ ಶಾಪ್ ಮುಂದೆ ಕ್ಯೂ ನಿಂತಿದ್ದಾರೆ. ಬಾಕ್ಸ್ಗಟ್ಟಲೆ ಮದ್ಯ ಖರೀದಿಸಿ, ಒಯ್ಯುತ್ತಿದ್ದಾರೆ. ನಗರದ ಎಲ್ಲ ವೈನ್ ಶಾಪ್ ಗಳ ಮುಂದೆ ಮದ್ಯ ಪ್ರಿಯರು ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದಾರೆ.