ಬೆಳಗಾವಿ: ತೀವ್ರ ಪೈಪೋಟಿಗೆ ಕಾರಣವಾಗಿದ್ದ ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿ ಅಚ್ಚರಿಯ ಹೆಜ್ಜೆ ಇರಿಸಿದ್ದು, ಬೆಳಗಾವಿಯ ಈರಣ್ಣ ಕಡಾಡಿ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಿದೆ.
ರಾಜ್ಯಸಭೆ ಪ್ರವೇಶಕ್ಕಾಗಿ ಜಿಲ್ಲೆಯ ಪ್ರಭಾವಿ ರಾಜಕೀಯ ಮುಖಂಡರಾದ ರಮೇಶ್ ಕತ್ತಿ ಹಾಗೂ ಡಾ.ಪ್ರಭಾಕರ ಕೋರೆ ತೀವ್ರ ಪೈಪೋಟಿ ನಡೆಸಿದ್ದರು. ಇವರಿಬ್ಬರ ಕಿತ್ತಾಟದ ಮಧ್ಯೆ ಈರಣ್ಣ ಕಡಾಡಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳ್ಳಿ ಗ್ರಾಮದವರಾದ ಈರಣ್ಣ ಕಡಾಡಿ, 1989ರಿಂದ ಸುಮಾರು 31 ವರ್ಷಗಳಿಂದ ಬಿಜೆಪಿ ಜೊತೆಗೆ ಸಕ್ರಿಯರಾಗಿದ್ದರು.
ಅರಭಾವಿ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿದ ಕಡಾಡಿ, ಗೋಕಾಕ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿದ್ದರು.
1994 ರಲ್ಲಿ ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಕಡಾಡಿ ಅವರು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಕೌಜಲಗಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. 2004ರಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಬಿಜೆಪಿ ಜಿಲ್ಲಾಧ್ಯಕ್ಷರಾಗಿ, 2010ರಲ್ಲಿ ಬೆಳಗಾವಿ ಜಿ.ಪಂ.ಅಧ್ಯಕ್ಷರಾಗಿ, ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಮೊದಲಿನಿಂದಲೂ ಆರ್‌ಎಸ್‌ಎಸ್, ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಈರಣ್ಣ ಸದ್ಯ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಭಾಗ ಒಳಗೊಂಡ ಬಿಜೆಪಿ ವಿಭಾಗೀಯ ಪ್ರಭಾರಿ ಆಗಿದ್ದಾರೆ.