ಕೊಯಿಲ(ದ.ಕ): ಕಾನೂನು ಪಾಲನೆಯ ಜತೆಗೆ ಜನತೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಮಸ್ಥರ ನೆರವಿನೊಂದಿಗೆ ಕಡಬ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮತ್ತು ಕೊಯಿಲ ಬೀಟ್ ಪೊಲೀಸ್ ಹರೀಶ್ ಎಂಬುವರು ಕೈ ಜೋಡಿಸುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಕೊಯಿಲ ಗ್ರಾಮದ ಬರೆಮೇಲು ವಳಕಡಮ ರಸ್ತೆ ಹಾಗೂ ವಳಕಡಮ ಹಿರಿಯ ಪ್ರಾಥಮಿಕ ಶಾಲೆ, ಹಾಲಿನ ಸೊಸೈಟಿ ರಸ್ತೆಯ ಬೀಜತ್ತಳಿಕೆ ಹಾಗೂ ಕೆರೆಕೋಡಿ ಎಂಬಲ್ಲಿ ರಸ್ತೆ ಹದಗೆಟ್ಟು ಸಂಚಾರಕ್ಕೆ ಅನಾನುಕೂಲವಾಗಿದೆ. ಈ ಕುರಿತು ಕೊನೆಮಜಲು-ವಳಕಡಮ ವ್ಯಾಪ್ತಿಯ ಗಾಮಸ್ಥರ ನೆರವಿನಿಂದ ಶ್ರಮದಾನದ ಮೂಲಕ ರಸ್ತೆಯ ಕೆಸರು ತೆಗೆದು ಚರಳು ಮಿಶ್ರಿತ ಮರಳು ಹಾಕಿ ದುರಸ್ತಿಗೊಳಿಸಲಾಯಿತು.
ಬೀಟ್ ಪೊಲೀಸ್ ಹರೀಶ್ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಮಾಳ ಅವರ ನೇತೃತ್ವದಲ್ಲಿ ಶ್ರಮದಾನ ನಡೆಯಿತು.
ಪೊಲೀಸ್ ಸಿಬ್ಬಂದಿ ಹರೀಶ್ ಈ ಹಿಂದೆ ಪುತ್ತೂರು ನಗರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ನರಿಮೊಗರು ವ್ಯಾಪ್ತಿಗಳಲ್ಲಿ ದಾನಿಗಳ ನೆರವಿನಿಂದ ಸಿಸಿಟಿವಿ ಕ್ಯಾಮರಾಗಳನ್ನು, ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಜನಮನ್ನಣೆಗೆ ಪಾತ್ರರಾಗಿದ್ದರು. ಅಲ್ಲದೆ ಆ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು.