ಬಾಗೇಪಲ್ಲಿ: ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಗಳಡಿ ಜಿಲ್ಲಾದ್ಯಂತ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಸರ್ಕಾರ ಮೌನ ವಹಿಸಿರುವುದು ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಬಿ.ವಿ.ವೆಂಕಟರಮಣ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹ 6 ನೇ ದಿನಕ್ಕೆ ಮುಕ್ತಾಯಗೊಂಡಿದ್ದು, ಈ ಧರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿ.ವಿ.ವೆಂಕಟರಮಣ ಅವರು, ಕಳೆದ 5 ದಿನಗಳಿಂದ ನಮ್ಮ ಬೇಡಿಕೆ ಈಡೇರಿಸಲು ದಲಿತ ಸಂಘರ್ಷ ಸಮಿತಿ ವತಿಯಿಂದ ಧರಣಿ ನಡೆಸುತ್ತಿದ್ದೆವು. ಆದರೆ ನಮ್ಮ ಬೇಡಿಕೆಗಳು 10 ನೇ ದಿನಾಂಕದ ಒಳಗಾಗಿ ಈಡೇರಿಸರಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದರು.
ಬಾಗೇಪಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಎಂ.ವಿ.ಲಕ್ಷ್ಮೀ ನರಸಿಂಹಪ್ಪ ಮಾತನಾಡಿ, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಹಾಗೂ ಸರ್ಕಾರದ ಅಧೀನ ಸಂಸ್ಥೆಗಳ ಕೇಂದ್ರಗಳಲ್ಲಿ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಕೋಟ್ಯಾಂತರ ರೂ. ಅವ್ಯವಹಾರ ನಡೆದಿದೆ. ಆದರೆ ಸರ್ಕಾರ ಈ ವಿಚಾರದಲ್ಲಿ ಮೌನ ವಹಿಸಿರುವುದು ಖಂಡನೀಯ. ದಲಿತರ ಅರ್ಥಿಕ ಅಭಿವೃದ್ಧಿಗಾಗಿ ಸರ್ಕಾರದಿಂದ ಹಣ ಬಿಡುಗಡೆಯಾಗುತ್ತದೆ. ಆದರೆ, ಈ ಹಣ ಅಧಿಕಾರಿಗಳ ಜೇಬು ತುಂಬುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪ್ರತಿಭಟನಾಕಾರರು ಬಾಗೇಪಲ್ಲಿ ತಹಶೀಲ್ದಾರ್ ಎಂ. ನಾಗರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.