ಮೈಸೂರು: ಐಎಎಸ್ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಶಾಸಕ ಸಾ.ರಾ.ಮಹೇಶ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಅಪ್ರಬುದ್ಧತೆ ಪ್ರದರ್ಶನವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹರಿಹಾಯ್ದಿದ್ದಾರೆ.
ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಇಬ್ಬರು ಐಎಎಸ್ ಅಧಿಕಾರಿಗಳು ನಿಯಮ ಬಾಹಿರವಾಗಿ ನಡೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳ ನಡವಳಿಕೆ ಸರಿಯಾಗಿ ಕಾಣಿಸಲಿಲ್ಲ. ಕೊರೊನಾ ಸಂದರ್ಭದಲ್ಲಿ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಟೀಕಿಸಿದರು.
ಮೈಸೂರಿನಲ್ಲಿ ನಡೆದ ಅಧಿಕಾರಿಗಳ ಕಿತ್ತಾಟದಿಂದ ದೇಶದಲ್ಲಿ ಮೈಸೂರಿಗೆ ಕೆಟ್ಟ ಹೆಸರು ಬಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತ ಮಹಾನ್ ವ್ಯಕ್ತಿ ಆಳಿದ ನಾಡಲ್ಲಿ ಇಂತಹ ಬೆಳವಣಿಗೆ ನಡೆಯಬಾರದು. ನನಗೂ ದೇಶದ ವಿವಿಧ ಭಾಗಗಳಿಂದ ಕರೆ ಮಾಡಿ ಮೈಸೂರಿನ ಬಗ್ಗೆ ಕೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಭೂ ಮಾಪಿಯಾದಿಂದ ನನ್ನ ವರ್ಗಾವಣೆ ಆಗಿದೆ ಎಂದು ರೋಹಿಣಿ ಸಿಂಧುರಿ ಆರೋಪ ಮಾಡಿದ್ದಾರೆ. ಇನ್ನೊಂದೆಡೆ ಶಾಸಕ ಸಾ.ರಾ.ಮಹೇಶ್ ಪ್ರತ್ಯಾರೋಪ ಮಾಡುತ್ತಿದ್ದಾರೆ. ಆರೋಪ ಹಾಗೂ ಪ್ರತ್ಯಾರೋಪಗಳ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಿ, ಸತ್ಯಾಂಶ ಹೊರಬರಬೇಕು. ಈ ಬಗ್ಗೆ ಸಿಎಂಗೆ ಪತ್ರ ಬರೆಯುತ್ತಿದ್ದೇನೆ ಎಂದರು.
ಐಎಎಸ್ ಹುದ್ದೆ ರದ್ದು ಮಾಡಿ:
ಐಎಎಸ್ ಎನ್ನುವುದು ಬ್ರಿಟಿಷ್ ಸಂಸ್ಕೃತಿಯ ಬಿಳಿ ಆನೆಗಳಿದ್ದಂತೆ. ನಮ್ಮ ದೇಶಕ್ಕೆ ಐಎಎಸ್ನಂತಹ ಹುದ್ದೆ ಅಗತ್ಯವಿಲ್ಲ. ಐಎಎಸ್ ಹುದ್ದೆಯನ್ನ ರದ್ದು ಮಾಡಬೇಕು. ಮಹಾತ್ಮ ಗಾಂಧೀಜಿ ಅವರು ಕೂಡ ಇದನ್ನು ಹೇಳಿದ್ದಾರೆ ಎಂದರು.