ತುಮಕೂರು: ಲೋಕಸಭಾ ಚುನಾವಣೆಗೆ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳು ದೇವರ ಮೊರೆ ಹೋಗುತ್ತಿದ್ದಾರೆ. ಅಂತೆಯೇ ಸಿದ್ಧಗಂಗಾ ಮಠಕ್ಕೆ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದರು.
ಇದೇ ವೇಳೆ ಮಾತನಾಡಿದ ಎ ಮಂಜು, ನಾನು ಮಠದ ಭಕ್ತನಾಗಿದ್ದೇನೆ. ಶಿವಕುಮಾರ ಸ್ವಾಮೀಜಿ ಅವರು ಇದ್ದ ಸಂದರ್ಭದಲ್ಲಿ ಆಗಾಗ್ಗೆ ಬಂದು ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದೆ. ಸೋಮವಾರ ನಾಮಪತ್ರ ಸಲ್ಲಿಸುತ್ತಿದ್ದೇನೆ. ಅದಕ್ಕಿಂತ ಮುಂಚೆ ಗದ್ದುಗೆಗೆ ಪೂಜೆ ಸಲ್ಲಿಸಲು ಬಂದಿದ್ದೇನೆ ಎಂದು ತಿಳಿಸಿದರು.
ದೇವೇಗೌಡರು ಸ್ಪರ್ಧಿಸುರುವುದು ವೈಯಕ್ತಿಕ ವಿಚಾರ. ತುಮಕೂರು ಜಿಲ್ಲೆಯ ಜನರು ಸ್ವಾಭಿಮಾನಿಗಳಾಗಿ ತೀರ್ಮಾನ ತೆಗೆದುಕೊಳ್ಳಬೇಕು. ಹಾಸನದಲ್ಲಿ ಕಳೆದ ಬಾರಿ ಕೊನೆ ಚುನಾವಣೆ ಅಂತ ದೇವೇಗೌಡರು ಭಾಷಣ ಮಾಡಿ ಬಂದಿದ್ದರು. ಗೌಡರು ಇಲ್ಲಿ ಬೇರೆಯವರಿಗೆ ಅವಕಾಶ ಮಾಡಿಕೊಡುವುದು ಸೂಕ್ತ ಎಂಬ ಸಲಹೆಯನ್ನು ಎ ಮಂಜು ನೀಡಿದರು.
ಮೊದಲಿನಿಂದಲೂ ಹಾಸನದಲ್ಲಿ ದೇವೇಗೌಡರು ನಿಲ್ಲಲಿ, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ನಿಲ್ಲಲಿ ಅಂತ ಹೇಳುತ್ತಿದ್ದೆ. ಆದ್ರೆ ಸಂಸ್ಥಾನ ಆಳ್ವಿಕೆಗೆ ಬೇಸತ್ತು ಬಿಜೆಪಿ ಸೇರಿದ್ದೇನೆ. ಜೆಡಿಎಸ್ ಕುಟುಂಬ ರಾಜಕಾರಣವಾಗುತ್ತಿದೆ ಎಂದು ಇದೇ ವೇಳೆ ಮಂಜು ಕುಟುಕಿದರು.
ಮಕ್ಕಳು ನಿಲ್ಲಬಾರದು ಅಂತಿಲ್ಲ. ಅದಕ್ಕೆ ವಯಸ್ಸು, ಅನುಭವ ಇರಬೇಕು. ಸುಮಲತಾ ಅವರಿಗೆ ಅಂಬರೀಶ್ ಮಾಡಿದ್ದ ರಾಜಕೀಯ ಅವರ ಪತ್ನಿಯಾಗಿ ಅನುಭವ ಇದೆ. ನಿಖಿಲ್ ಮಂಡ್ಯದ ಅಭಿವೃದ್ಧಿಗೆ ಬಂದಿದ್ದೇನೆ ಅಂತ ಹೇಳ್ತಾರೆ. ಹಾಗಾದ್ರೆ ಪುಟ್ಟರಾಜು, ತಮ್ಮಣ್ಣ ಅಭಿವೃದ್ಧಿ ಮಾಡಿಲ್ವಾ ಎಂದು ಮಂಜು ಪ್ರಶ್ನಿಸಿದರು.
ಪ್ರಜ್ವಲ್ ಅವರ ತಾತ, ತಂದೆ , ಚಿಕ್ಕಪ್ಪ ಅಧಿಕಾರದಲ್ಲಿದ್ದಾರೆ. ಸೇವೆ ಮಾಡಲು ಅಷ್ಟು ಸಾಕಲ್ಲವೆ. ಹಾಸನದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬರುತ್ತಿದ್ದರು. ವೈಯಕ್ತಿಕ ಹೋರಾಟವಿಲ್ಲ. ಈಗ ನೇರಾನೇರ ಚುನಾವಣೆಯಿದೆ. ಕಾಂಗ್ರೆಸ್ ಸಾಂಪ್ರದಾಯಿಕ ಮತಗಳು ಜೆಡಿಎಸ್ಗೆ ಹೋಗಲ್ಲ. ಮೇಲ್ಮಟ್ಟದಲ್ಲಿ ಹೊಂದಾಣಿಕೆಯಾದ್ರೂ ತಳಮಟ್ಟದಲ್ಲಿ ಹೊಂದಾಣಿಕೆ ಆಗಲ್ಲವೆಂದು ಬಿಜೆಪಿ ಅಭ್ಯರ್ಥಿ ಅಭಿಪ್ರಾಯಪಟ್ಟರು.