ಬೆಂಗಳೂರು: ನಗರದ ಹಲವೆಡೆ ಇಂದು ಮುಂಜಾನೆ ಸೂರ್ಯ ಚಮತ್ಕಾರ ಮೂಡಿಸಿದ್ದಾನೆ. ಸೂರ್ಯನ ಸುತ್ತ ರಿಂಗ್ ತರಹದ ಚಿತ್ರಣ ಗೋಚರವಾಗಿದೆ.
ಖಗೋಳ ವಿಜ್ಞಾನಿಗಳಿಗೆ ಕೂಡ ಕುತೂಹಲ ಮೂಡಿಸಿದ್ದು, ಹಲವರು ಈ ವಿಸ್ಮಯವನ್ನು ತಮ್ಮ ಕ್ಯಾಮರಾ ಮತ್ತು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಸಂಬಂಧ ಸಾಕಷ್ಟು ಚರ್ಚೆ ಕೂಡ ನಡೆಯುತ್ತಿದೆ. ಆರಂಭದಲ್ಲಿ ಹಸಿರು ನಂತರ ನೀಲಿ, ನಂತರ ಹಳದಿ ಬಣ್ಣದಲ್ಲಿ ಸೂರ್ಯನ ಸುತ್ತ ಬಳೆ ಸೃಷ್ಟಿಯಾದಂತೆ ಬಾನಂಗಳದಲ್ಲಿ ಕಂಡು ಬಂದಿದೆ.

ನಾಡಿದ್ದು, ಚಂದ್ರಗ್ರಹಣವಿದ್ದು ಅದಕ್ಕೂ ಮುನ್ನ ಸೂರ್ಯ ತನ್ನ ವಿಶೇಷತೆಯನ್ನು ತೋರಿಸಿದ್ದಾನೆ. ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಬರಿಗಣ್ಣಿನಲ್ಲಿ ಗೋಚರವಾಗಿದೆ. ರಾಜಾಧಾನಿಯಲ್ಲಿ ಸೂರ್ಯನ ಸುತ್ತ ಕಂಡ ಕಾಮನಬಿಲ್ಲನ್ನು ಸೌರ ಪ್ರಭೆ ಎಂದು ಗುರುತಿಸಲಾಗಿದ್ದು, ಇದು ನಮ್ಮ ವಾತಾವರಣದಲ್ಲಿ 20,000 ಅಡಿಗಳ ಮೇಲಿರುವ ಉಂಗುರಾಕಾರದ ಸೀರಿಸ್ ಮೋಡಗಳೊಳಗೆ ಇರುವ ಮಂಜುಗಡ್ಡೆಯ ಹರಳುಗಳು ಸೂರ್ಯನ ಬೆಳಕಿನ ಕಿರಣಗಳನ್ನು ಪ್ರತಿಫಲಿಸುವುದರಿಂದ ಆಗುವ ವಿದ್ಯಮಾನವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.