ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಸರ್ಕಾರಿ ಆಸ್ವತ್ರೆಯಲ್ಲಿ ಕಾನೂನು ಪಾಲನೆ ಮಾಡದೇ ಹಾಗೂ ಅಕ್ರಮವಾಗಿ ಮಗುವನ್ನು ಪಡೆದುಕೊಂಡ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ಆರು ಜನರ ವಿರುದ್ಧ ಕೇಸ್ ದಾಖಲಾಗಿದೆ.
ಪ್ರಕರಣ ಒಂದರಲ್ಲಿ ನಗರದ ನಿವಾಸಿಯಾದ ವನಜ ಮತ್ತು ಕೀನ್ಯಾ ನಾಯಕ್ ದಂಪತಿ, ಬನ್ನೂರಿನ ಯೋಗೇಶ್ ಮತ್ತು ಕವಿತ ದಂಪತಿಗೆ ಜನಿಸಿದ ಹೆಣ್ಣು ಮಗುವನ್ನು ಪಡೆದುಕೊಂಡಿದ್ದಾರೆ ಎಂದು ದೂರು ದಾಖಲಾಗಿದೆ.
ಎರಡನೇ ಪ್ರಕರಣದಲ್ಲಿ ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿಯ ಜಾಹಿರ ಮತ್ತು ಶುಕುರ್ ಅಹಮ್ಮದ್ ದಂಪತಿ ಸರ್ಕಾರಿ ಆಸ್ವತ್ರೆಗೆ ಭೇಟಿ ನೀಡಿದಾಗ, ಅಪರಿಚಿತರು ಗಂಡು ಮಗುವನ್ನು ಸಾಕಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ವೇಳೆ ಈ ದಂಪತಿ ಅವರಿಂದ ಮಗುವನ್ನು ಪಡೆದುಕೊಂಡು ಬಂದು ಸಾಕಿದ್ದಾರೆ. ಮಗುವಿನ ತಂದೆ, ತಾಯಿಯ ಹೆಸರು ತಿಳಿದಿಲ್ಲ ಎಂದು ದೂರಿನಲ್ಲಿದೆ.
ಈ ಪ್ರಕರಣಗಳಲ್ಲಿ ಮಹಿಳೆಯರಾದ ವನಜ, ಕೆ.ಎಂ ಜಾಹಿರಾ ಎನ್ನುವರು ಗರ್ಭಿಣಿಯಾಗಿರದೆ, ಆಸ್ವತ್ರೆಯಲ್ಲಿ ಹೊರರೋಗಿ ಹಾಗೂ ಒಳರೋಗಿ ಚೀಟಿಯನ್ನು ಮಾಡಿಸದೇ ನೇರವಾಗಿ ಹೆರಿಗೆ ಮಾಡಿಸಿಕೊಂಡು ಹೋಗಿರುವಂತೆ ಸುಳ್ಳು ದಾಖಲಾತಿಯನ್ನು ಸೃಷ್ಟಿಸಿ ಜನನ ಪ್ರಮಾಣ ಪತ್ರವನ್ನು ಪಡೆದಿರೋದು ಬೆಳಕಿಗೆ ಬಂದಿದೆ.
ಪ್ರಾಥಮಿಕ ಜಂಟಿ ವರದಿ ನೋಡಿದಾಗ ಯಾವುದೇ ಕಾನೂನು ಪ್ರಕ್ರಿಯೆಗಳು ಜರಗದೆ ಮಗುವನ್ನು ಅಕ್ರಮವಾಗಿ ತಂದು ಸಾಕುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಮಗು ಕೊಟ್ಟವರ ಹಾಗೂ ಪಡೆದವರ ವಿರುದ್ಧ ಬಾಲನ್ಯಾಯ ಕಾಯ್ದೆಯಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ರಂಗನಾಥ್ ದೂರು ನೀಡಿದ್ದಾರೆ.