ಹಾಸನ : ನಾಳೆ(ಮೇ 24) ರಿಂದ ಮತ್ತೆ 14 ದಿನಗಳ ಕಾಲ ಲಾಕ್ಡೌನ್ ವಿಸ್ತರಣೆಯಾದ ಬೆನ್ನಲ್ಲೇ ಹಾಸನ ಪೊಲೀಸರು ಮತ್ತಷ್ಟು ಕಠಿಣ ನಿಯಮ ಜಾರಿಗೆ ತರುತ್ತಿದ್ದಾರೆ.
ನ್ಯಾಯಾಲಯದ ಆದೇಶದ ಅನ್ವಯದಂತೆ ಜಿಲ್ಲೆಯಲ್ಲಿಯೂ ಬಿಗಿ ಬಂದೋಬಸ್ತ್ ಮಾಡುವ ಮೂಲಕ ಸುಖಾಸುಮ್ಮನೆ ಓಡಾಡುವವರಿಗೆ ನಾಳೆಯಿಂದ ಪೊಲೀಸರು ಕಠಿಣ ನಿಯಮ ಜಾರಿಗೊಳಿಸಲಿದ್ದಾರೆ.
ವಾರದಲ್ಲಿ ಮೂರು ದಿನ ಮಾತ್ರ ಬೆಳಗ್ಗೆ 6 ರಿಂದ 10 ಗಂಟೆವರೆಗೆ ವ್ಯಾಪಾರ, ವಹಿವಾಟಿಗೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಹಾಸನ ಜಿಲ್ಲಾಡಳಿತ ಸಹ ಅದೇ ರೀತಿ ನಿಯಮಗಳನ್ನು ಜಾರಿ ಮಾಡಿದೆ.
ನಾಳೆಯಿಂದ ಹಾಸನದ ಗಡಿಭಾಗ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ಬಿಗಿ ಬಂದೋಬಸ್ತ್ ಮಾಡಲಿದೆ.
ಈ ಸಂಬಂಧ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲೆಯಲ್ಲಿ ಮೇ 10ರಿಂದ 23ರ ತನಕ ಸುಖಾಸುಮ್ಮನೆ ಓಡಾಡುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸಿ ಸುಮಾರು 3500 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ವಿವಿಧ ರೀತಿಯ ಪ್ರಕರಣದಡಿ ಅವರಿಗೆ ದಂಡ ವಿಧಿಸಲಾಗಿದೆ ಎಂದ ಅವರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿರುವ ನಂದಿನಿ ಅವರನ್ನ ನಮ್ಮ ಇಲಾಖೆಯ ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ.
ಹಿಮ್ಸ್ ಆಸ್ಪತ್ರೆಯ ವೈದ್ಯರೊಬ್ಬರನ್ನು ಪೊಲೀಸ್ ಸೋಂಕಿತ ಸಿಬ್ಬಂದಿ ಆರೈಕೆಗಾಗಿ ನೇಮಕ ಮಾಡಲಾಗಿದೆ. ಹೀಗಾಗಿ, ನಾವು ಕೂಡ ಸಿಬ್ಬಂದಿಗೆ ಸೋಂಕು ತಗುಲದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದೇವೆ ಎಂದರು.
ವೆಂಟಿಲೇಟರ್ ಕೊಡುಗೆ : ಮೇ 24ರಂದು ಮತ್ತೆ 3 ಆಮ್ಲಜನಕದ ವೆಂಟಿಲೇಟರ್‌ಗಳನ್ನು ಕೊಡುಗೆಯಾಗಿ ನೀಡುತ್ತಿದ್ದೇವೆ. ಯಾರಿಗೆ ಅತ್ಯವಶ್ಯಕತೆ ಇದೆ ಎಂಬುದರ ಆಧಾರದ ಮೇಲೆ ಅವುಗಳನ್ನು ಸೋಂಕಿತ ಸಿಬ್ಬಂದಿಗೆ ಉಪಯೋಗಿಸಬೇಕೆಂದು ಕೂಡ ನಾವು ಮನವಿ ಮಾಡಿದ್ದೇವೆ ಎಂದಿದ್ದಾರೆ.