ಮುಂಬೈ: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದ ಪಿ 305' ಬಾರ್ಜ್ ಹಡಗಿನಿಂದ ಈಗಾಗಲೇ 184 ಜನರನ್ನು ರಕ್ಷಿಸಲಾಗಿದೆ. ಇನ್ನು ಎರಡು ದಿನಗಳ ಬಳಿಕ 14 ಮಂದಿಯ ಮೃತದೇಹ ಪತ್ತೆಯಾಗಿದ್ದು, ಅವುಗಳನ್ನು ಹೊರ ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣೆ ಮಾಡಿದ ಈ 184 ಜನರನ್ನು ಹೊತ್ತ ಐಎನ್‌ಎಸ್ ಕೊಚ್ಚಿ ಭಾರತೀಯ ನೌಕಾಪಡೆಯ ಹಡಗು ಬುಧವಾರ ಮುಂಜಾನೆ ಮುಂಬೈ ಬಂದರಿಗೆ ತಲುಪಿದೆ. ಮುಂಬೈನ ಸಮುದ್ರ ತೀರದಲ್ಲಿ ಸೋಮವಾರ 'ಪಿ 305' ಹೆಸರಿನ ಬಾರ್ಜ್ ಚಂಡ ಮಾರುತದ ಹೊಡೆತಕ್ಕೆ ಸಿಲುಕಿ ಮುಳುಗಡೆಯಾಗಿತ್ತು.
ಐಎನ್‌ಎಸ್ ಟೆಗ್, ಐಎನ್‌ಎಸ್ ಬೆತ್ವಾ, ಐಎನ್‌ಎಸ್ ಬಿಯಾಸ್, ಪಿ8ಐ ಏರ್‌ಕ್ರಾಫ್ಟ್ ಹಾಗೂ ಸೀಕಿಂಗ್ ಹೆಲೋಸ್ ಮೂಲಕ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಈ ಬಾರ್ಜ್‌ನಲ್ಲಿ ಒಟ್ಟು 273 ಸಿಬ್ಬಂದಿ ಇದ್ದರು ಎಂದು ಹೇಳಲಾಗಿದೆ.
ಎಸ್‌ಎಸ್-3 ಹಡಗಿನಲ್ಲಿದ್ದ 196 ಜನ ಹಾಗೂ ಸಾಗರ್ ಭೂಷಣ್‌ನಲ್ಲಿದ್ದ 101 ಜನರು ಸುರಕ್ಷಿತವಾಗಿದ್ದಾರೆ. ಓಎನ್‌ಜಿಸಿ ಮತ್ತು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಹಡಗುಗಳು ಬಾರ್ಜ್‌ಗಳನ್ನು ತೀರಕ್ಕೆ ಎಳೆ ತರುವ ಕಾರ್ಯವನ್ನು ನಡೆಸುತ್ತಿದೆ ಎಂದು ನೌಕಾಪಡೆಯ ವಕ್ತಾರರು ಮಾಹಿತಿಯನ್ನು ನೀಡಿದ್ದಾರೆ.