ಬೆಂಗಳೂರು: ವಿಶ್ವಾಸಮತ ಯಾಚನೆ ಚರ್ಚೆಗಾಗಿ ಸೇರಿದ್ದ ವಿಧಾನಸಭೆ ಕಲಾಪ ಇಂದು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ಗದ್ದಲಕ್ಕೆ ಬಲಿಯಾಗಿದೆ. ಹೀಗಾಗಿ ಕಲಾಪ ನಾಳೆ ಬೆಳಗ್ಗೆ 11ಗಂಟೆಗೆ ಮುಂದೂಡಿಕೆಯಾಗಿದೆ.
ಈ ನಡುವೆ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರು ಸದನದಲ್ಲೇ ಅಹೋರಾತ್ರಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಸದನದಲ್ಲಿ ವಿಶ್ವಾಸಮತಯಾಚನೆ ಆಗುವವರೆಗೂ ಇಲ್ಲೇ ಇರುವುದಾಗಿ ಬಿಎಸ್ವೈ ಹೇಳಿದರು. ಇನ್ನು ವಿಶ್ವಾಸ ಮತಯಾಚನೆಗೆ ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಇದರ ಮಧ್ಯೆ ಇಂದೇ ವಿಶ್ವಾಸಮತ ಪ್ರಕ್ರಿಯೆ ಮುಗಿಸುವಂತೆ ರಾಜ್ಯಪಾಲರು, ಸ್ಪೀಕರ್ಗೆ ಸಂದೇಶ ರವಾನಿಸಿದರೂ ಪ್ರಯೋಜನವಾಗಿಲ್ಲ.
ಸದನದಲ್ಲಿ ಬಿಜೆಪಿಯವರೇ ಆಪರೇಷನ್ ಕಮಲ ನಡೆಸಿದ್ದಾರೆ ಎಂದು ಕಾಂಗ್ರೆಸ್-ಜೆಡಿಎಸ್ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರ ಭಾವಚಿತ್ರ ಪ್ರದರ್ಶಿಸಿ ಧರಣಿ ನಡೆಸಿದರು.
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಸುಪ್ರೀಂಕೋರ್ಟ್ ಮೊರೆ ಹೋಗಲು ಜೆಡಿಎಸ್ ನಿರ್ಧರಿಸಿದೆ. ಜೆಡಿಎಸ್ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಹಾಗೂ ಸ್ಪೀಕರ್ ಪರವಾಗಿ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.