ನವದೆಹಲಿ: ಜಾಹೀರಾತಿನಲ್ಲಿ ಉಜ್ಜಯಿನಿಯ ಪ್ರಸಿದ್ಧ ಮಹಾಕಾಲನ ಬಗ್ಗೆ ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಝೊಮ್ಯಾಟೋ ಅವಮಾನಿಸಿದ್ದು, ಇದು ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದೆ. ತಕ್ಷಣವೇ ಜಾಹೀರಾತನ್ನು ವಾಪಸ್ ಪಡೆಯಬೇಕು ಎಂದು ದೇಗುಲದ ಅರ್ಚಕರು ಆಗ್ರಹಿಸಿದ್ದಾರೆ.
ಆಹಾರ ವಿತರಣೆ ಕಂಪೆನಿಯಾದ ಝೊಮ್ಯಾಟೊ ನಟ ಹೃತಿಕ್ ರೋಷನ್ ಅವರನ್ನು ಒಳಗೊಂಡ ಜಾಹೀರಾತು ರೂಪಿಸಿದೆ. ಅದರಲ್ಲಿ ಹೃತಿಕ್ "ಉಜ್ಜಯಿನಿಯಿಂದ ಊಟ ಸವಿಯಲು ಮನಸ್ಸಾಯಿತು. ಅದಕ್ಕಾಗಿ ಮಹಾಕಾಲನಿಂದ ಆರ್ಡರ್ ಮಾಡಿದೆ" ಎಂದು ಹೇಳುತ್ತಾರೆ.
ಈ ಜಾಹೀರಾತಿಗೆ ಆಕ್ಷೇಪ ವ್ಯಕ್ತವಾಗಿದೆ. ಉಜ್ಜಯಿನಿಯ ಮಹಾಕಾಲ ದೇಗುಲದಲ್ಲಿ ಪ್ರಸಾದವನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ, ಝೊಮ್ಯಾಟೊ ಅದನ್ನು ಹಣ ನೀಡಿ ಖರೀದಿಸಲಾಗುತ್ತದೆ ಎಂಬ ರೀತಿ ಬಿಂಬಿಸಿದೆ. ಇದು ಹಿಂದು ಭಕ್ತರ ಭಾವನೆಗೆ ಧಕ್ಕೆ ತಂದಿದೆ. ಹೀಗಾಗಿ ಸಂಸ್ಥೆ ಜಾಹೀರಾತನ್ನು ತಕ್ಷಣವೇ ಹಿಂಪಡೆದು, ಕ್ಷಮೆ ಕೋರಬೇಕು ಎಂದು ದೇಗುಲದ ಅರ್ಚಕರಾದ ಮಹೇಶ್ ಮತ್ತು ಆಶಿಶ್ ಒತ್ತಾಯಿಸಿದ್ದಾರೆ.
ಮಹಾಕಾಲ್ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಉಜ್ಜಯಿನಿ ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಅವರಿಗೂ ಈ ಬಗ್ಗೆ ದೂರು ನೀಡಲಾಗಿದೆ. ಹಿಂದೂ ಧರ್ಮವನ್ನು ಅಪಹಾಸ್ಯ ಮಾಡದಂತೆ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಅಥವಾ ಮಹಾಕಾಲ ಶಿವನ ದೇವಾಲಯ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: ವಿಮಾನದಲ್ಲಿ ನೇತಾಡುತ್ತಾ ವರ್ಕ್ ಔಟ್ ಮಾಡಿದ ಮಹಿಳಾ ಸ್ಕೈಡೈವರ್: ವಿಡಿಯೋ ನೋಡಿ