ಹೈದರಾಬಾದ್: ಮಾಜಿ ಸಂಸದ ವೈ.ಎಸ್ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಕಡಪ ಸಂಸದ ವೈ.ಎಸ್ ಅವಿನಾಶ್ ರೆಡ್ಡಿ ಅವರ ತಂದೆ ವೈ.ಎಸ್ ಭಾಸ್ಕರ್ ರೆಡ್ಡಿ ಅವರನ್ನು ಏ.16 ರಂದು ಮುಂಜಾನೆ ಅವರ ನಿವಾಸದಿಂದ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲು ಬಿಗಿ ಭದ್ರತೆ ನಡುವೆ ತಕ್ಷಣ ಹೈದರಾಬಾದ್‌ಗೆ ಕರೆದೊಯ್ಯಲಾಗಿದೆ. ಅವಿನಾಶ್ ರೆಡ್ಡಿ ಅವರ ಆಪ್ತ ಅನುಯಾಯಿ ಹಾಗೂ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗಜ್ಜೆಲ ಉದಯ್ ಕುಮಾರ್ ರೆಡ್ಡಿ ಬಂಧನದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.
ಸಿಬಿಐ ವರದಿಯಲ್ಲಿ ಏನಿದೆ?:ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ವೈ.ಎಸ್ ಭಾಸ್ಕರ್ ರೆಡ್ಡಿ ಪಾತ್ರ, ಕೊಲೆ ಸಂಚು, ಸಾಕ್ಷ್ಯ ನಾಶ ಮತ್ತಿತರ ಅಂಶಗಳು ಸಿಬಿಐ ತನಿಖೆಯಲ್ಲಿ ಬಹಿರಂಗಗೊಂಡಿವೆ. ವೈ.ಎಸ್ ಭಾಸ್ಕರ್ ಅವರನ್ನು 10 ದಿನಗಳ ಕಸ್ಟಡಿಗೆ ಒಪ್ಪಿಸಿದ್ದು, ಸಿಬಿಐ ಸಲ್ಲಿಸಿದ ಚಾರ್ಜ್ ಶೀಟ್ನಲ್ಲಿ ಈ ಮೇಲಿನ ಎಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ. ಅಲ್ಲದೇ ಕೊಲೆ ನಡೆದ ಸ್ಥಳದಲ್ಲಿ ಸಾಕ್ಷ್ಯ ನಾಶಪಡಿಸಿದ್ದು ಇವರೇ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ಕೊಲೆಗೂ ಮುನ್ನ ಮತ್ತು ನಂತರದ ಬೆಳವಣಿಗೆಗಳ ಬಗ್ಗೆ ಸಿಬಿಐ ವಿವರವಾದ ವರದಿ ನೀಡಿದೆ. ಕೊಲೆಯಾಗುವ ಕೆಲವು ಗಂಟೆಗಳ ಮೊದಲು ಆರೋಪಿ ಸುನೀಲ್ ಯಾದವ್ ಭಾಸ್ಕರ ರೆಡ್ಡಿ ಮನೆಯಲ್ಲಿದ್ದ ಎನ್ನಲಾಗಿದೆ. ಫೆ.10, 2019 ರಂದು ಎರ್ರಾ ಗಂಗಿರೆಡ್ಡಿ ಅವರ ಮನೆಯಲ್ಲಿ ವಿವೇಕಾನಂದ ರೆಡ್ಡಿ ಅವರನ್ನು ಕೊಲ್ಲಲು ಯೋಜನೆ ರೂಪಿಸಲಾಗಿತ್ತು ಎಂದು ಸಿಬಿಐ ಹೇಳಿದೆ.
ಯೋಜಿತ ಹತ್ಯೆ: ವಿವೇಕಾನಂದ ರೆಡ್ಡಿ ಅವರನ್ನು ಕೊಂದರೆ ನಿಮ್ಮ ಬದುಕು ಚೆನ್ನಾಗಿರುತ್ತದೆ ಎಂದು ಎರ್ರಾ ಗಂಗಿರೆಡ್ಡಿ ಹೇಳಿದ್ದಾರೆ ಎಂದು ವೈ.ಎಸ್ ವಿವೇಕಾನಂದ ರೆಡ್ಡಿ ಅವರ ಮಾಜಿ ಚಾಲಕ ಶೇಖ್ ದಸ್ತಗಿರಿ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನೀವೊಬ್ಬರೇ ಅಲ್ಲ, ನಿಮ್ಮೊಂದಿಗೆ ನಾವು ಬರುತ್ತೇವೆ. ಇದರ ಹಿಂದೆ, ವೈ.ಎಸ್ ಭಾಸ್ಕರ್ ರೆಡ್ಡಿ, ವೈ.ಎಸ್.ಅವಿನಾಶ್ ರೆಡ್ಡಿ, ವೈ.ಎಸ್.ಮನೋಹರ ರೆಡ್ಡಿ, ದೇವಿರೆಡ್ಡಿ, ಶಿವಶಂಕರ ರೆಡ್ಡಿಯಂತಹ ದೊಡ್ಡ ವ್ಯಕ್ತಿಗಳಿದ್ದಾರೆ. ಈ ಕೊಲೆ ಮಾಡಿದರೆ ಶಿವಶಂಕರ ರೆಡ್ಡಿ 40 ಕೋಟಿ ಕೊಡುತ್ತಾರೆ. ಅದರಲ್ಲಿ 5 ಕೋಟಿ ಪಾಲು ನೀಡುವುದಾಗಿ ಎರ್ರಾ ಗಂಗಿರೆಡ್ಡಿ ಹೇಳಿರುವುದಾಗಿ ಶೇಖ್ ದಸ್ತಗಿರಿ ಸಿಬಿಐಗೆ ಹೇಳಿಕೆ ನೀಡಿದ್ದಾರೆ.
ಪ್ರಕರಣದ ಎರಡನೇ ಆರೋಪಿ ಸುನೀಲ್ ಯಾದವ್ ವಿವೇಕಾನಂದ ಅವರನ್ನು ಕೊಲ್ಲುವುದಾಗಿ ಹೇಳಿ ಎರಡ್ಮೂರು ದಿನಗಳ ನಂತರ ಒಂದು ಕೋಟಿ ರೂಪಾಯಿ ಕೊಟ್ಟಿದ್ದಾರೆ ಎಂದು ದಸ್ತಗಿರಿ ವಿವರಿಸಿದ್ದಾರೆ. ಎರ್ರಾ ಗಂಗಿರೆಡ್ಡಿ ಹೇಳಿದಂತೆ ಮಾಡು. ನಾವು ನಿಮ್ಮೊಂದಿಗಿದ್ದೇವೆ ಎಂದು ಹೇಳಿದ್ದೇವೆ ಅಲ್ಲವೇ? ಮತ್ತೆ ಯಾಕೆ ಅನುಮಾನ ಪಡುತ್ತಿದ್ದೀಯಾ?’ ಎಂದು ಶಿವಶಂಕರರೆಡ್ಡಿ ನನ್ನನ್ನು ಪ್ರಶ್ನಿಸಿದ್ದಾರೆ. ಕೊಲೆಯಾದ ದಿನ ಬೆಳಗಿನ ಜಾವ 5 ಗಂಟೆಗೆ ಗಂಗಿರೆಡ್ಡಿ ಹಾಗೂ ಇತರರನ್ನು ತನ್ನ ಮನೆಗೆ ಕರೆಸಿ ಹೆದರಬೇಡ ಎಂದು ಹೇಳಿದ್ದಾರೆ. ಶಿವಶಂಕರರೆಡ್ಡಿ ಹಾಗೂ ವೈ.ಎಸ್.ಅವಿನಾಶ್ ರೆಡ್ಡಿ ಜತೆ ಮಾತನಾಡಿದ್ದೇನೆ. ಎಲ್ಲವನ್ನೂ ಅವರು ನೋಡಿಕೊಳ್ಳುತ್ತಾರೆ ಎಂದರು. ಉಳಿದ ಹಣವನ್ನು ನನಗೂ ನೀಡುವುದಾಗಿ ಹೇಳಿದ್ದರು ಎಂದು ದಸ್ತಗಿರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಸಿಬಿಐ ಉಲ್ಲೇಖಿಸಿದೆ.
ಹತ್ಯೆಗೂ ಕೆಲ ಗಂಟೆಗಳ ಮುನ್ನ: ಪ್ರಕರಣದ 2ನೇ ಆರೋಪಿ ಸುನಿಲ್ ಯಾದವ್ ವಿವೇಕಾನಂದ ಹತ್ಯೆಗೆ ಕೆಲವು ಗಂಟೆಗಳ ಮೊದಲು (ಮಾ.14, 2019, ಸಂಜೆ 6.14 ರಿಂದ 6.33) ವೈ.ಎಸ್ ಭಾಸ್ಕರ್ ರೆಡ್ಡಿ ಅವರ ಮನೆಯಲ್ಲಿದ್ದರು ಎಂದು ಸಿಬಿಐ ಗೂಗಲ್ ಟೇಕ್-ಔಟ್ ವಿಶ್ಲೇಷಣೆಯ ಮೂಲಕ ಪತ್ತೆ ಮಾಡಿದೆ. ಫೋರೆನ್ಸಿಕ್ ವಿಶ್ಲೇಷಣೆಯಲ್ಲಿ ಇದು ದೃಢಪಟ್ಟಿದೆ. ಅದೇ ದಿನ ಜಮ್ಮಲಮಡುಗು ಕ್ಷೇತ್ರದಲ್ಲಿ ವಿವೇಕಾನಂದ ಅವರೊಂದಿಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಪುಲಿವೆಂದುಲಕ್ಕೆ ವಾಪಸಾಗುತ್ತಿದ್ದಾಗ ಸಂಜೆ 6.22ಕ್ಕೆ ಸುನೀಲ್ ಯಾದವ್ ಅವರಿಗೆ ಪ್ರಮುಖ ಆರೋಪಿ ಎರ್ರಾ ಗಂಗಿರೆಡ್ಡಿ ಎರಡು ಬಾರಿ ಕರೆ ಮಾಡಿರುವುದು ಬೆಳಕಿಗೆ ಬಂದಿದೆ. ಅಂದು ದಸ್ತಗಿರಿ ರಾತ್ರಿ 8:30ಕ್ಕೆ ಪುಲಿವೆಂದು ಬಂದು ಸುನೀಲ್ ಯಾದವ್ ಅವರನ್ನು ಭೇಟಿಯಾಗಿದ್ದಾನೆ.
ಕೊಡಲಿಯಿಂದ ಕೊಚ್ಚಿ ಕೊಲೆ: ಪೂರ್ವ ಯೋಜಿತ ಪ್ಲಾನ್ ಪ್ರಕಾರ ವೈ.ಎಸ್ ಭಾಸ್ಕರ ರೆಡ್ಡಿ ಆ ವೇಳೆ ತನ್ನ ಎರಡು ಫೋನ್ ಸ್ವಿಚ್ ಆಫ್ ಮಾಡಿದ್ದರು. ಅದೇ ದಿನ ಸುನೀಲ್ ಯಾದವ್, ಗಜ್ಜಲ ಉಮಾಶಂಕರ ರೆಡ್ಡಿ, ಶೇಖ್ ದಸ್ತಗಿರಿ, ಎರ್ರಾ ಗಂಗಿರೆಡ್ಡಿ ಎಂಬುವರು ವಿವೇಕಾನಂದ ಅವರನ್ನು ಅತ್ಯಂತ ಭೀಕರವಾಗಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ. ವಿವೇಕಾನಂದ ಹತ್ಯೆಗೆ ಕೆಲವು ಗಂಟೆಗಳ ಮೊದಲು ಸುನೀಲ್ ಯಾದವ್ ಭಾಸ್ಕರ್ ರೆಡ್ಡಿ ಮತ್ತು ಅವಿನಾಶ್ ರೆಡ್ಡಿ ಅವರ ಮನೆಗೆ ಪದೇ ಪದೆ ಭೇಟಿ ನೀಡಿದ್ದರು ಎಂದು ಸಿಬಿಐ ತಿಳಿಸಿದೆ. ವೈ.ಎಸ್ ಭಾಸ್ಕರ್ ರೆಡ್ಡಿ ಈ ಹತ್ಯೆಯ ಪ್ರಮುಖ ಪಾತ್ರಧಾರಿ ಎಂದೂ ಸಿಬಿಐ ಜಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ಹೃದಯಾಘಾತ ಎಂದು ಬಿಂಬಿಸಲು ಯತ್ನ: ಕೊಲೆ ಬಳಿಕ 2019ರ ಮಾ.15ರಂದು ಬೆಳಗ್ಗೆ ಆರೋಪಿಗಳಾದ ದೇವಿರೆಡ್ಡಿ ಶಿವಶಂಕರರೆಡ್ಡಿ, ಗಜ್ಜಲ ಉಮಾಶಂಕರರೆಡ್ಡಿ, ಉದಯ ಕುಮಾರ್ ರೆಡ್ಡಿ, ವೈ.ಎಸ್ ಭಾಸ್ಕರ್ ರೆಡ್ಡಿ, ಅವಿನಾಶ್ ರೆಡ್ಡಿ ಮನೆಯಲ್ಲಿದ್ದರು ಎಂದು ಸಿಬಿಐ ಬಹಿರಂಗಪಡಿಸಿದೆ. ಹತ್ಯೆ ಪ್ಲಾನ್ ಕಾರ್ಯರೂಪಕ್ಕೆ ಬಂದಿರುವುದು ಅವರಿಗೆ ಮೊದಲೇ ತಿಳಿದಿತ್ತು. ಸಾವಿನ ಮಾಹಿತಿಯನ್ನು ಬೇರೆಯವರ ಮೂಲಕ ಪಡೆದು, ತಕ್ಷಣ ಅಲ್ಲಿಗೆ ತಲುಪಿ ಸಾಕ್ಷ್ಯ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಅಲ್ಲಿಯೇ ಕಾದು ಕುಳಿತಿದ್ದರು. ಹತ್ಯೆ ನಡೆದ ಸ್ಥಳದಲ್ಲಿ ಸಾಕ್ಷ್ಯ ನಾಶ ಹಾಗೂ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂಬ ಪ್ರಚಾರವನ್ನು ಅವಿನಾಶ್ ರೆಡ್ಡಿ, ಭಾಸ್ಕರ ರೆಡ್ಡಿ, ಶಿವಶಂಕರರೆಡ್ಡಿ, ಉದಯಕುಮಾರ್ ರೆಡ್ಡಿ, ಗಂಗಿರೆಡ್ಡಿ ಅವರ ಸಮ್ಮುಖದಲ್ಲೇ ನಡೆಸಲಾಗಿದೆ ಎಂದು ಸಿಬಿಐ ಹೇಳಿದೆ. ತಲೆಗೆ ಗಂಭೀರ ಗಾಯ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವವನ್ನು ನೋಡಿಯೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಚಾರ ಆರಂಭಿಸಿದರು.
ಮಾ.15, 2019 ರಂದು, ಬೆಳಗ್ಗೆ 6.32 ಕ್ಕೆ ಅವಿನಾಶ್ ರೆಡ್ಡಿ ಅವರನ್ನ ಇತ್ತೀಚೆಗಷ್ಟೇ ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಬಳಿಕ ಅದೇ ನಂಬರ್‌ಗೆ 6.40 ಮತ್ತು 6.41ಕ್ಕೆ ಎರಡು ಬಾರಿ ಕರೆ ಮಾಡಿದ ಅವಿನಾಶ್ ರೆಡ್ಡಿ, ನಂತರ ಪಿಎ ರಾಘವರೆಡ್ಡಿ ಅವರ ಫೋನ್‌ನಿಂದ ಪುಲಿವೆಂದುಲ ಇನ್ಸ್‌ಪೆಕ್ಟರ್ ಶಂಕರಯ್ಯ ಅವರಿಗೆ ಕರೆ ಮಾಡಿ ವಿವೇಕಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ರಕ್ಷಣೆಗೆ ಸಿಬ್ಬಂದಿಯನ್ನು ಕಳುಹಿಸುವಂತೆ ಕೋರಿದ್ದಾರೆ. ಬಳಿಕ ವಿಷಯ ತಿಳಿದ ಇನ್ಸ್ ಪೆಕ್ಟರ್ ಶಂಕರಯ್ಯ ಅವರು ಮೌನ ವಹಿಸಿದ್ದು, ಹೃದಯಾಘಾತದಿಂದ ಸಾವಿಗೀಡಾಗಿದೆ ಎಂದು ಪ್ರಕರಣದ ನಿರ್ವಹಣೆ ಮಾಡುವಂತೆ ಬೆದರಿಕೆ ಹಾಕಿರುವುದು ಷಡ್ಯಂತ್ರಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಿಬಿಐ ತನ್ನ ವರದಿಯಲ್ಲಿ ಹೇಳಿದೆ.
ಬ್ಯಾಂಡೇಜ್ ಸುತ್ತಿ, ಸಾಕ್ಷಿ ನಾಶ: ವರದಿಯ ಪ್ರಕಾರ, ವಿವೇಕಾನಂದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ದೇವಿರೆಡ್ಡಿ ಶಿವಶಂಕರ ರೆಡ್ಡಿ ಅವರು ಮೊದಲು ಸಾಕ್ಷಿ ಟಿವಿಗೆ ತಿಳಿಸಿದರು. ಅವರ ಹತ್ಯೆಯನ್ನು ಸಹಜ ಸಾವು ಎಂದು ಬಿಂಬಿಸುವ ಯೋಜನೆಯ ಭಾಗವಾಗಿ ಘಟನಾ ಸ್ಥಳದಲ್ಲಿದ್ದ ಸಾಕ್ಷ್ಯ ನಾಶಪಡಿಸಲು ಆರಂಭಿಸಿದರು. ವೈ.ಎಸ್.ಭಾಸ್ಕರ್ ರೆಡ್ಡಿ ಮತ್ತು ಅವಿನಾಶ್ ರೆಡ್ಡಿ ಅವರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಈ ಎಲ್ಲಾ ಪ್ರಕ್ರಿಯೆ ನಡೆದಿದೆ. ಸಾಕ್ಷ್ಯ ನಾಶದ ವೇಳೆ ವಿವೇಕಾ ಅವರ ಮನೆಗೆ ಯಾರೂ ಬರದಂತೆ ಭಾಸ್ಕರ್ ಒಳಗಿನಿಂದ ಬಾಗಿಲು ಮುಚ್ಚಿದ್ದರು. ಬಾಗಿಲಲ್ಲಿಯೇ ಉಳಿದುಕೊಂಡಿದ್ದ, ರಕ್ತದ ಕಲೆಗಳನ್ನು ಸ್ವಚ್ಛಗೊಳಿಸುವ ಮತ್ತು ಗಾಯಗಳನ್ನು ಕತ್ತರಿಸಿ ಬ್ಯಾಂಡೇಜ್ ಮಾಡುವ ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಯಿತು. ಆ ವೇಳೆ, ಅವಿನಾಶ್ ರೆಡ್ಡಿ ಎರಡು ಮೂರು ಬಾರಿ ಒಳಗೆ ಹೋಗಿ ಹೊರಗೆ ಬಂದಿದ್ದರು. ಮೃತ ದೇಹಕ್ಕೆ ಯಾವುದೇ ಗಾಯಗಳು ಕಾಣಿಸದಂತೆ ಬ್ಯಾಂಡೇಜ್ ಸುತ್ತಿ, ಹೂವಿನಿಂದ ಅಲಂಕರಿಸಲಾಗಿತ್ತು. ಬಳಿಕ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು.
ಸಿಬಿಐಗೆ ಪ್ರಕರಣ ಹಸ್ತಾಂತರ: ಪ್ರಕರಣದ ತನಿಖೆ ಸಿಬಿಐ ಕೈಗೆ ಹೋದಾಗ ಸುನೀಲ್ ಯಾದವ್ ಮತ್ತು ಗಜ್ಜಲ ಉಮಾಶಂಕರರೆಡ್ಡಿ ಅವರು ಕಡಪ ಸಂಸದ ವೈ.ಎಸ್ ಅವಿನಾಶ್ ರೆಡ್ಡಿ, ಅವರ ತಂದೆ ವೈಎಸ್ ಭಾಸ್ಕರ್ ರೆಡ್ಡಿ ಮತ್ತು ದೇವಿರೆಡ್ಡಿ ಶಿವಶಂಕರರೆಡ್ಡಿ ಅವರನ್ನು ಈಶ್ವರಯ್ಯ ಗಾರ್ಡನ್‌ನಲ್ಲಿ ಭೇಟಿಯಾಗಿರುವುದಾಗಿ ದಸ್ತಗಿರಿ ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದರು.
ಇದನ್ನೂ ಓದಿ: ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣ: ಸಿಬಿಐಯಿಂದ ಆಂಧ್ರ ಸಿಎಂ ಒಎಸ್‌ಡಿ & ಮನೆಯ ಸಹಾಯಕರ ವಿಚಾರಣೆ