ಮುಂಬೈ (ಮಹಾರಾಷ್ಟ್ರ): 21 ವರ್ಷದ ಯೂಟ್ಯೂಬರ್ ಮನೆಯ ಸಿಸಿಟಿವಿ ಹ್ಯಾಕ್ ಮಾಡಿರುವ ದುಷ್ಕರ್ಮಿ, ಅಶ್ಲೀಲ ವಿಡಿಯೋವನ್ನು ಶೇರ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಚಾರ ತಿಳಿದ ಯೂಟ್ಯೂಬರ್ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಹ್ಯಾಕರ್ನ ಬಂಧನಕ್ಕೆ ಬಲೆ ಬೀಸಿದ್ದಾರೆ.
"ಮುಂಬೈ ಮೂಲದ ಯೂಟ್ಯೂಬರ್ ಮನೆಯಲ್ಲಿದ್ದ ಸಿಸಿಟಿವಿ ಹ್ಯಾಕ್ ಮಾಡಿ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಸದ್ಯ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ" ಎಂದು ಮುಂಬೈನ ಉಪ ಪೊಲೀಸ್ ಆಯುಕ್ತ ರಾಜ್ ತಿಲಕ್ ರೋಷನ್ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಮುಂಬೈ ಮೂಲದ 21 ವರ್ಷದ ಯೂಟ್ಯೂಬರ್ ತಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ಅವರಿಗೆ ತಿಳಿಯದಂತೆ ಯಾರೋ ಅಪರಿಚಿತರು ಸಿಸಿಟಿವಿ ಹ್ಯಾಕ್ ಮಾಡಿದ್ದಾರೆ. ಬಳಿಕ ನವೆಂಬರ್ 17ರಂದು ಯೂಟ್ಯೂಬರ್ನ ಅಶ್ಲೀಲ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಯೂಟ್ಯೂಬರ್ನ ಸ್ನೇಹಿತರು ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಯೂಟ್ಯೂಬರ್ ಪೊಲೀಸರನ್ನು ಸಂಪರ್ಕಿಸಿದ್ದಾರೆ.
'ಸೈಬರ್ ತಂಡವು ತಾಂತ್ರಿಕ ಸಹಾಯದಿಂದ ಅಪ್ಲೋಡ್ ಮಾಡಿದವರ ಇಂಟರ್ನೆಟ್ ಪ್ರೋಟೋಕಾಲ್ (ಐಪಿ) ವಿಳಾಸವನ್ನು ಕಂಡು ಹಿಡಿಯುತ್ತಿದೆ. ಜೊತೆಗೆ ಸೋಷಿಯಲ್ ಮೀಡಿಯಾ ವೇದಿಕೆಯಿಂದ ಈ ವಿಡಿಯೋ ತೆಗೆದು ಹಾಕುವಂತೆ ವಿನಂತಿಸಲಾಗಿದೆ. ಸಿಸಿಟಿವಿಯಲ್ಲಿನ ವಿವರಗಳನ್ನು ಅಕ್ರಮವಾಗಿ ಹೇಗೆ ಪಡೆದುಕೊಳ್ಳುತ್ತಾರೆ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ' ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರಕರಣದ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಸೆಕ್ಷನ್ 500, ಭಾರತೀಯ ದಂಡ ಸಂಹಿತೆಯ 50 ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66 (ಸಿ), 66 (ಇ), ಮತ್ತು 67 (ಎ) ಅಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಹ್ಯಾಕರ್ ಮಾಹಿತಿ ಪತ್ತೆ ಹಚ್ಚುವಲ್ಲಿ ಬಾಂದ್ರಾ ಪೊಲೀಸರು ನಿರತರಾಗಿದ್ದಾರೆ.
ಇತ್ತೀಚಿನ ಘಟನೆ: ಪೊಲೀಸ್ ಠಾಣೆಯೊಂದರ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿದ ಅಪರಿಚಿತ ದುಷ್ಕರ್ಮಿಗಳು ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದ ಘಟನೆ ಹೈದರಾಬಾದ್ನಲ್ಲಿ ಕೆಲದಿನಗಳ ಹಿಂದೆ ನಡೆದಿತ್ತು. ಹೈದರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಆಸಿಫ್‌ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಫೇಸ್‌ಬುಕ್ ಅಕೌಂಟ್ ಚೆಕ್ ಮಾಡಿದಾಗ ಈ ವಿಷಯ ತಿಳಿದು ಬಂದಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಖಾತೆ ಸ್ಥಗಿತಗೊಳಿಸಿದ್ದರು.
"ಆಸಿಫ್‌ನಗರ ಠಾಣೆಯ ಕಾನ್ಸ್ಟೇಬಲ್ ಠಾಣೆಯ ಅಧಿಕೃತ ಫೇಸ್‌ಬುಕ್ ಖಾತೆ ಲಾಗ್ಇನ್ ಆಗಲು ಯತ್ನಿಸಿದ್ದ ವೇಳೆ ಸಾಧ್ಯವಾಗಿರಲಿಲ್ಲ. ಕೆಲ ನಿಮಿಷಗಳ ನಂತರ ಮತ್ತೆ ಲಾಗಿನ್ ಆಗಲು ಪ್ರಯತ್ನಿಸಿದ್ದರು ಆಗ ಕೂಡ ಸಮಸ್ಯೆ ಕಂಡು ಬಂದಿತ್ತು. ಬಳಿಕ ತಮ್ಮ ಫೋನ್‌ನಲ್ಲಿ ಖಾತೆ ಪರಿಶೀಲಿಸಿದಾಗ ಐದು ಅಶ್ಲೀಲ ವಿಡಿಯೋಗಳನ್ನು ಅಪ್ಲೋಡ್ ಮಾಡಿರುವುದು ಕಂಡು ಬಂದಿತ್ತು. ಕೂಡಲೇ ಮೇಲಧಿಕಾರಿಗಳಿಗೆ ವಿಷಯ ತಿಳಿಸಿ, ಅಕೌಂಟ್ ಹ್ಯಾಕ್ ಆಗಿರುವುದು ಪತ್ತೆಯಾಗಿತ್ತು. 6,000 ಕ್ಕೂ ಹೆಚ್ಚು ಮಂದಿ ಖಾತೆಯನ್ನು ಫಾಲೋವ್ ಮಾಡುತ್ತಿದ್ದರು" ಎಂದು ಇನ್ಸ್ಪೆಕ್ಟರ್ ಎಸ್ ನವೀನ್ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಫೋನ್ ಹ್ಯಾಕ್ ಆಗಿದ್ರೆ ತಿಳಿಯುವುದು ಹೇಗೆ?: ಹ್ಯಾಕ್ ಆಗದಂತೆ ತಡೆಯುವುದು ಹೇಗೆ.. ಇಲ್ಲಿದೆ ಡೀಟೇಲ್ಸ್!