ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ಮಂಗಳವಾರ ತಡರಾತ್ರಿ ಇಬ್ಬರು ವಿದ್ಯಾರ್ಥಿನಿಯರನ್ನು ಕಾರಿನಲ್ಲಿ ಅಪಹರಿಸಲು ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಂತ್ರಸ್ತ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಘಟನೆ ಬಗ್ಗೆ ಜೆಎನ್‌ಯು ಉಪಕುಲಪತಿ ಮತ್ತು ಭದ್ರತಾ ಪ್ರಭಾರಾಧಿಕಾರಿಗಳಿಗೂ ದೂರು ನೀಡಲಾಗಿದೆ. ಜೆಎನ್‌ಯು ವಿದ್ಯಾರ್ಥಿ ಸಂಘ ಮತ್ತು ಎಬಿವಿಪಿ ಪರವಾಗಿ ಜೆಎನ್‌ಯು ಆಡಳಿತಕ್ಕೂ ದೂರು ನೀಡಲಾಗಿದೆ. ಈ ನಡುವೆ ಕ್ಯಾಂಪಸ್ ಭದ್ರತೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಎಬಿವಿಪಿ ಪ್ರಕಾರ "ರಾತ್ರಿ ಒಂದು ಗಂಟೆಯ ಸುಮಾರಿಗೆ ಇಬ್ಬರು ವಿದ್ಯಾರ್ಥಿನಿಯರು ಕ್ಯಾಂಪಸ್‌ನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಹರಿಯಾಣ ನಂಬರ್ ಪ್ಲೇಟ್ ಇರುವ ಬಿಳಿ ಬಣ್ಣದ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಬಂದ ಮೂವರು ಹುಡುಗರು ವಿದ್ಯಾರ್ಥಿನಿಯರಿಬ್ಬರನ್ನೂ ಎಳೆದೊಯ್ದು ಕಾರಿನಲ್ಲಿ ಕೂರಿಸಲು ಯತ್ನಿಸಿದ್ದಾರೆ. ಬಾಲಕಿಯರ ವಿರೋಧದಿಂದಾಗಿ ಅವರನ್ನು ಅಪಹರಿಸಲು ಸಾಧ್ಯವಾಗದೇ ಸ್ಥಳದಿಂದ ಪರಾರಿಯಾಗಿದ್ದಾನೆ. ಕ್ಯಾಂಪಸ್‌ನಲ್ಲಿ ಈ ಕಾರು ಆಗಾಗ ಕಾಣಿಸಿಕೊಳ್ಳುತ್ತದೆ" ಎಂದು ಎಬಿವಿಪಿ ಆರೋಪಿಸಿದೆ.
ದೆಹಲಿ ಪೊಲೀಸರಿಗೆ ಅಲ್ಟಿಮೇಟಮ್: ಇಬ್ಬರು ಸಂತ್ರಸ್ತ ಬಾಲಕಿಯರಲ್ಲಿ ಒಬ್ಬಳು ತನ್ನ ಎಂಎಲ್‌ಸಿ(Medico legal case)ಯನ್ನು ಪಡೆದಿದ್ದಾಳೆ ಮತ್ತು ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘ ಹೇಳಿದೆ. ಜೆಎನ್‌ಯು ವಿದ್ಯಾರ್ಥಿ ಸಂಘದಿಂದ ಉಪಕುಲಪತಿಗಳಿಗೆ ದೂರು ನೀಡಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಕುಲಪತಿಗಳನ್ನು ಭೇಟಿ ಮಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಿದ್ದಾರೆ. ಇದರೊಂದಿಗೆ ವಿದ್ಯಾರ್ಥಿ ಸಂಘದ ವತಿಯಿಂದ ದೆಹಲಿ ಪೊಲೀಸರಿಗೆ ಅಲ್ಟಿಮೇಟಮ್ ನೀಡಲಾಗಿದೆ. 12 ಗಂಟೆಯೊಳಗೆ ದೆಹಲಿ ಪೊಲೀಸರು ಆರೋಪಿಗಳನ್ನು ಬಂಧಿಸದಿದ್ದರೆ ವಿದ್ಯಾರ್ಥಿ ಸಂಘ ಪ್ರತಿಭಟನೆ ನಡೆಸಲಿದೆ ಎಂದು ವಿದ್ಯಾರ್ಥಿ ಸಂಘ ಎಚ್ಚರಿಕೆ ನೀಡಿದೆ.
ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನೆ: ಎಬಿವಿಪಿ ಮತ್ತು ಜೆಎನ್‌ಯು ವಿದ್ಯಾರ್ಥಿ ಒಕ್ಕೂಟವು ಜೆಎನ್‌ಯು ಕ್ಯಾಂಪಸ್ ರಾಜಧಾನಿಯ ಸುರಕ್ಷಿತ ಕ್ಯಾಂಪಸ್‌ಗಳಲ್ಲಿ ಒಂದಾಗಿದೆ ಎಂದು ಹೇಳುತ್ತದೆ. ಇದರ ಹೊರತಾಗಿಯೂ, ಇಂತಹ ಭದ್ರತಾ ಲೋಪಗಳು ಭದ್ರತಾ ವ್ಯವಸ್ಥೆಯ ಮೇಲೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಜೆಎನ್‌ಯು ಕ್ಯಾಂಪಸ್‌ನಲ್ಲಿ ಹೊರಗಿನವರು ಮತ್ತು ಕಿಡಿಗೇಡಿಗಳು ಪ್ರವೇಶಿಸದಂತೆ ಭದ್ರತಾ ವ್ಯವಸ್ಥೆಗಳನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ತಮಿಳುನಾಡಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನದಂದು(ಫೆಬ್ರವರಿ) ರಾತ್ರಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಗಲಾಟೆ ನಡೆದಿತ್ತು. ಎರಡು ವಿದ್ಯಾರ್ಥಿ ಸಂಘಟನೆಗಳು ಪರಸ್ಪರ ಹೊಡೆದಾಡಿಕೊಂಡಿದ್ದರು. ಘಟನೆಯ ಬಳಿಕ ಜೆಎನ್‌ಯುನಿಂದ ಹೊಸ ವಿಡಿಯೋವೊಂದು ಹೊರಬಿದ್ದಿತ್ತು. ಜೆಎನ್‌ಯುಎಸ್‌ಯು ಕಚೇರಿಯ ಗೋಡೆಗಳ ಮೇಲೆ ಆಕ್ಷೇಪಾರ್ಹ ಬರಹ ಬರೆದಿರುವುದು ಗೋಚರಿಸಿತ್ತು. ಇದರೊಂದಿಗೆ ಜೈ ಶಿವಾಜಿಯ ಹೆಸರುಗಳನ್ನು ವಿವಿಧೆಡೆ ಬರೆಯಲಾಗಿತ್ತು. ಅಷ್ಟೇ ಅಲ್ಲದೇ ಕಾಲೇಜಿನಲ್ಲಿ ಓದುತ್ತಿರುವ ತಮಿಳುನಾಡಿನ ಮೂವರು ವಿದ್ಯಾರ್ಥಿಗಳ ಮೇಲೆ ಎಬಿವಿಪಿಗೆ ಸೇರಿದ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ: ಇಷ್ಟೊಂದು ಅಭದ್ರತೆ ಇದ್ದರೆ ನಾವು ಓದುವುದು ಹೇಗೆ?: ಜೆಎನ್ಯುಗೆ ಹಲ್ಲೆಗೊಳಗಾದ ತಮಿಳು ವಿದ್ಯಾರ್ಥಿಗಳ ಪ್ರಶ್ನೆ