ಪಾಟ್ನಾ(ಬಿಹಾರ) : ದೆಹಲಿಯಿಂದ ಪಾಟ್ನಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮದ್ಯವ್ಯಸನಿಗಳ ದುಷ್ಕೃತ್ಯ ಬೆಳಕಿಗೆ ಬಂದಿದೆ. ಪ್ರಯಾಣಿಕನೊಬ್ಬ ಗಗನಸಖಿಯೊಂದಿಗೆ ಅನುಚಿತವಾಗಿ ವರ್ತಿಸಿದ ವಿಷಯ ತಿಳಿದು ಕ್ಯಾಪ್ಟನ್ ಸ್ಥಳಕ್ಕಾಗಮಿಸಿದಾಗ ಅವರೊಂದಿಗೂ ಜಗಳ ತೆಗೆದು ಹಲ್ಲೆ ಮಾಡಲಾಗಿದೆ. ಇಂಡಿಗೋ ವಿಮಾನದಲ್ಲಿ ಘಟನೆ ನಡೆದಿದ್ದು, ಸಹ ಪ್ರಯಾಣಿಕರು ಬೆಚ್ಚಿಬಿದ್ದಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆೆ.
ಇಂಡಿಗೋ ವಿಮಾನ ಸಂಖ್ಯೆ 6E 6383 ರಲ್ಲಿ ಮೂವರು ಪ್ರಯಾಣಿಕರು ಮದ್ಯ ಸೇವಿಸಿ ದಾಂಧಲೆ ನಡೆಸಿದ್ದಾರೆ. ದೆಹಲಿಯಿಂದ ಹತ್ತಿದ ಕೂಡಲೇ ಈ ಕುಡುಕ ಪ್ರಯಾಣಿಕರ ಗಲಾಟೆ ಶುರುವಾಗಿದೆ. ವಿಮಾನ ಸಿಬ್ಬಂದಿ ಸಮಾಧಾನಪಡಿಸಲು ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ರಾತ್ರಿ 10:00 ಗಂಟೆಗೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಮೂವರೂ ಬಂದಿಳಿದ ತಕ್ಷಣವೇ ಆರೋಪಿಗಳನ್ನು ಬಂಧಿಸಲಾಗಿದೆ.
ಓರ್ವ ಪ್ರಯಾಣಿಕ ಪರಾರಿ: ವಿಮಾನದಲ್ಲಿ ಗಲಾಟೆ ಸೃಷ್ಟಿಸಿದ ಪಿಂಟು ಎಂಬಾತ ಪರಾರಿಯಾಗಿದ್ದಾನೆ. ಇಬ್ಬರು ಆರೋಪಿಗಳನ್ನು ನಿತಿನ್ ಕುಮಾರ್ ಮತ್ತು ರೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ. ಸಿಐಎಸ್ಎಫ್ ಬಂಧಿಸಿದ ಈ ಪ್ರಯಾಣಿಕರಿಬ್ಬರೂ ರಾಜಕಾರಣಿಗಳಿಗೆ ಬೆದರಿಕೆಯೊಡ್ಡಿದ್ದಾರೆ. ಇನ್ನೊಬ್ಬ ಪ್ರಯಾಣಿಕ ತಮ್ಮನ್ನು ತಾವು ಪತ್ರಕರ್ತ ಎಂದು ಸಾಬೀತುಪಡಿಸಲು ಪ್ರಯತ್ನಿಸಿದ್ದಾನೆ. ಆದರೆ ಸಿಐಎಸ್ಎಫ್ ಇಬ್ಬರೂ ಪ್ರಯಾಣಿಕರನ್ನು ಬಂಧಿಸಿದ್ದಾರೆ ಎಂದು ಏರ್‌ಪೋರ್ಟ್ ಮೂಲಗಳಿಂದ ತಿಳಿದುಬಂದಿದೆ.
ಸಿಐಎಸ್ಎಫ್ ಇಬ್ಬರು ಪ್ರಯಾಣಿಕರನ್ನು ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ. ಏರ್‌ಪೋರ್ಟ್ ಪೊಲೀಸ್ ಠಾಣೆಯ ಅಧಿಕಾರಿ ಬ್ರೀತ್ ಅನಲೈಸರ್ ಮೂಲಕ ತಪಾಸಣೆ ನಡೆಸಿದಾಗ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಬಂಧಿತ ಪ್ರಯಾಣಿಕರಿಬ್ಬರೂ ಹಾಜಿಪುರ ನಿವಾಸಿ ಎಂದು ತಿಳಿದು ಬಂದಿದೆ. ತಲೆಮರೆಸಿಕೊಂಡಿರುವ ಪಿಂಟು ಕುಮಾರ್‌ನನ್ನು ಬಂಧಿಸಲು ಸ್ಥಳೀಯ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಮರು ಕಳಿಸುತ್ತಿರುವ ಘಟನೆಗಳು..: ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ವಿಮಾನದಲ್ಲಿ ನಿರಂತರವಾಗಿ ಕಂಡುಬರುತ್ತಿವೆ. ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಕರ ಮೈಮೇಲೆ ಮೂತ್ರ ವಿಸರ್ಜನೆ ಮಾಡಿರುವ ಎರಡು ಪ್ರಕರಣಗಳು ವರದಿಯಾಗಿವೆ. ಒಂದು ಪ್ರಕರಣದಲ್ಲಿ ಕುಡಿದ ಅಮಲಿನಲ್ಲಿ ಪ್ರಯಾಣಿಕನೊಬ್ಬ ತನ್ನ ಮಹಿಳಾ ಸಹ-ಪ್ರಯಾಣಿಕರ ಹೊದಿಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಆತನನ್ನು ಬಳಿಕ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು.
ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆ ಪುರುಷ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಘಾತಕಾರಿ ಅಂಶಗಳು ಹೊರಬಂದಿದ್ದವು. ವಿಮಾನದಲ್ಲಿ ಊಟದ ಸಮಯದಲ್ಲಿ ಆರೋಪಿಯು ನಾಲ್ಕು ಗ್ಲಾಸ್ ವಿಸ್ಕಿ ಸೇವಿಸಿದ್ದನಂತೆ. ಆರೋಪಿಯ ಪಕ್ಕದಲ್ಲಿ ಕುಳಿತಿದ್ದ ವೈದ್ಯ ಸುಗತ ಭಟ್ಟಾಚಾರ್ಜಿ ವಿಮಾನಯಾನ ಸಂಸ್ಥೆಗೆ ತಾವು ಬರೆದ ಲಿಖಿತ ದೂರಿನಲ್ಲಿ ಅಂದು ನಡೆದ ಘಟನೆಯ ಬಗ್ಗೆ ಉಲ್ಲೇಖಿಸಿದ್ದರು.
ಕಳೆದ ನವೆಂಬರ್ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪದ ಮೇಲೆ ಶಂಕರ್ ಮಿಶ್ರಾ ಎಂಬಾತನನ್ನು ಶುಕ್ರವಾರ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಿಶ್ರಾ ಪಕ್ಕದಲ್ಲಿ ಅಮೆರಿಕದ ಮೂಲಕ ವೈದ್ಯ ಸುಗತ ಭಟ್ಟಾಚಾರ್ಜಿ ಕುಳಿತಿದ್ದರು. ಈ ವೇಳೆ ಆರೋಪಿ ಎಸಗಿರುವ ಕೃತ್ಯವನ್ನು ತಮ್ಮ ದೂರಿನಲ್ಲಿ ಅವರು ವಿವರಿಸಿದ್ದರು.
ಇದನ್ನೂ ಓದಿ: ಓದಿನಲ್ಲಿ ಪ್ರೇರೇಪಿಸಲು ವಿದ್ಯಾರ್ಥಿನಿಯರಿಗೆ ವಿಮಾನಯಾನ: ಸರ್ಕಾರಿ ಶಾಲೆಗೆ ಹೆಸರು ತಂದ ಪ್ರಾಂಶುಪಾಲರ ಮಾದರಿ ಕಾರ್ಯ