ಮುಜಾಫರ್ನಗರ/ಉತ್ತರಪ್ರದೇಶ: ಯುವಕರು ಅರ್ಧ ಪ್ಯಾಂಟ್ ಧರಿಸುವುದನ್ನು ಮತ್ತು ಯುವತಿಯರು ಜೀನ್ಸ್ ಹಾಗೂ ಸ್ಕರ್ಟ್ ಧರಿಸುವುದಕ್ಕೆ ಮುಜಾಫರ್ನಗರದ ಖಾಪ್ ಪಂಚಾಯತ್ ನಿಷೇಧ ಹೇರಿದೆ.
ಒಂದು ವೇಳೆ ಪಂಚಾಯತ್ನ ಈ ಆದೇಶವನ್ನು ಉಲ್ಲಂಘಿಸಿದರೆ ಅಂತವರನ್ನು ಗ್ರಾಮದಿಂದ ಬಹಿಷ್ಕಾರ ಮಾಡುವುದಾಗಿಯೂ ಘೋಷಿಸಿದೆ. ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾದಾಗಿನಿಂದ ಪಶ್ಚಿಮ ಉತ್ತರ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳ ಹವಾ ಪ್ರಾರಂಭವಾಗಿದೆ. ಪಂಚಾಯಿತಿಗಳಲ್ಲಿ, ಸಮಾಜದ ಕೆಲಜನ ತಮ್ಮ ಸ್ಥಾನಮಾನ ಮತ್ತು ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೊಸ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದ ಮುಜಫರ್ನಗರದ ಚಾರತವಾಲ್ ವಿಧಾನಸಭಾ ಕ್ಷೇತ್ರದ ಪಿಪ್ಪಲ್ಷಾ ಗ್ರಾಮದಲ್ಲಿ ಕ್ಷತ್ರಿಯ ರಜಪೂತ್ ಸಮಾಜ ಪಂಚಾಯಿತಿ ನಡೆಸಿತ್ತು.
ಪಂಚಾಯಿತಿಯ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೈತ ಸಂಘಟನೆಯ ಅಧ್ಯಕ್ಷ ಠಾಕೂರ್ ಪೂರ್ಣ ಸಿಂಗ್ ಸಾಮಾಜಿಕ ದುಷ್ಕೃತ್ಯಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ್ರು. ನಂತರ ಯುವಕರು ಹಾಗೂ ಯುವತಿಯರು ಜೀನ್ಸ್ ಪ್ಯಾಂಟ್ ಧರಿಸುವುದು ಸಮಾಜಕ್ಕೆ ಒಳ್ಳೆಯದಲ್ಲ, ಹೀಗಾಗಿ ಸಮಾಜದ ಹಿತದೃಷ್ಟಿಯಿಂದ ಈ ರೀತಿಯ ಬಟ್ಟೆಗಳನ್ನು ಧರಿಸುವುದನ್ನು ನಿಷೇಧ ಮಾಡುತ್ತಿರುವುದಾಗಿ ಘೋಷಿಸಿದ್ರು.
ಈ ಆದೇಶದ ಅನ್ವಯ ಈ ಪಂಚಾಯತ್ ವ್ಯಾಪ್ತಿಯ ಯಾವುದೇ ಹುಡುಗ ಅರ್ಧ ಪ್ಯಾಂಟ್ ಧರಿಸಿ ತಿರುಗಾಡುತ್ತಿದ್ದರೆ, ಸಮಾಜವು ಅವರನ್ನು ಶಿಕ್ಷಿಸಲಿದೆ. ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ಒಳ್ಳೆಯ ವಿಷಯ. ಆದರೆ, ಹುಡುಗಿಯರು ಜೀನ್ಸ್ ಧರಿಸುವುದು ಅಥವಾ ಆಕ್ಷೇಪಾರ್ಹ ಬಟ್ಟೆಗಳನ್ನು ಧರಿಸುವುದು ಸಮಾಜಕ್ಕೆ ಒಳ್ಳೆಯದಲ್ಲ. ಜೀನ್ಸ್ ಟಾಪ್ ಧರಿಸಿ ಹಳ್ಳಿಗೆ ಹೋಗಬೇಡಿ ಮತ್ತು ಶಾಲಾ ಕಾಲೇಜುಗಳಲ್ಲಿ ಈ ರೀತಿ ಜೀನ್ಸ್ ಧರಿಸು ಬರುವುದಕ್ಕೆ ಅವಕಾಶ ನೀಡಿದರೆ ಅಂತಹ ಶಾಲಾ - ಕಾಲೇಜುಗಳನ್ನು ಸಹ ಬಹಿಷ್ಕಾರ ಮಾಡಲಾಗುವುದು ಎಂದು ಠಾಕೂರ್ ಪೂರ್ಣ ಸಿಂಗ್ ತಿಳಿಸಿದ್ದಾರೆ.