ಚಂಡೀಗಢ : ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರೊಬ್ಬರ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಚಂಡೀಗಢದಲ್ಲಿ ಮಂಗಳವಾರ ರಾತ್ರಿ 12.30 ಗಂಟೆಗೆ ನಡೆದಿದೆ. ಪಾಣಿಪತ್ ಬಿಜೆಪಿ ಶಾಸಕ ಪ್ರಮೋದ್ ವಿಜ್ ಅವರಿಗೆ ಸೇರಿದ ಕಾರು ಇದಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಕಾರಿನೊಳಗೆ ಮತ್ತು ಸುತ್ತಲೂ ಯಾರೂ ಇರದ ಕಾರಣ ಯಾವುದೇ ಹಾನಿ ಸಂಭವಿಸಿಲ್ಲ.
ಹರಿಯಾಣ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಚಂಡೀಗಢಕ್ಕೆ ಆಗಮಿಸಿದ್ದರು. ಈ ವೇಳೆ ಪಂಚಕುಲದಲ್ಲಿನ ಶಾಸಕರ ಭವನದ ಮುಂದೆ ಕಾರು ನಿಲ್ಲಿಸಲಾಗಿತ್ತು. ಭದ್ರತಾ ಸಿಬ್ಬಂದಿ ಹಾಗೂ ಚಾಲಕ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಕಾರಿನ ಬಳಿ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಈ ವೇಳೆ ಅಲ್ಲಿದ್ದ ಜನರು ಮತ್ತು ಭದ್ರತಾ ಸಿಬ್ಬಂದಿ ಇದನ್ನು ಕಂಡು ಓಡಿ ಬರುವಷ್ಟರಲ್ಲಿ ದುಷ್ಕರ್ಮಿ ಪರಾರಿಯಾಗಿದ್ದಾನೆ ಎಂದು ಬಿಜೆಪಿ ಶಾಸಕ ಪ್ರಮೋದ್ ವಿಜ್ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶೀಘ್ರವೇ ಕಿಡಿಗೇಡಿಯನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಾಲದ ಆಸೆ ತೋರಿಸಿ ವಂಚನೆ: ಹೈದರಾಬಾದ್‌ಗೂ ಕಾಲಿಟ್ಟ ಚೀನಾದ ಆ್ಯಪ್‌ಗಳ ಮೇಲೆ ಪೊಲೀಸರ ಹದ್ದಿನ ಕಣ್ಣು