ನವದೆಹಲಿ: ಸ್ಪೈವೇರ್ ಸಾಫ್ಟ್‌ವೇರ್ ಆದ ಪೆಗಾಸಸ್ ಅನ್ನು ಬಳಸಿಕೊಂಡು ಕೇಂದ್ರ ಸರ್ಕಾರ ರಾಜಕಾರಣಿಗಳು, ಪತ್ರಕರ್ತರ ಮೇಲೆ ಗೂಢಚರ್ಯೆ ನಡೆಸುತ್ತಿದೆ ಎಂಬ ಆಪಾದನೆಯ ವಿರುದ್ಧ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ನಡೆಯುವ ಚರ್ಚೆಯ ವೇಳೆ ಸಂಸತ್ ಹೊರಗಡೆ ಇಂದು ಪ್ರತಿಭಟನೆ ನಡೆಸಲಾಗುವುದು ಎಂದು ಯುವ ಕಾಂಗ್ರೆಸ್ ತಿಳಿಸಿದೆ.
ಪ್ರತಿಪಕ್ಷಗಳ ನಾಯಕರು, ನ್ಯಾಯಾಧೀಶರು, ಪತ್ರಕರ್ತರು, ನಾಗರಿಕರ ಮೇಲೆ ಪೆಗಾಸಸ್ ಸಾಫ್ಟ್‌ವೇರ್‌ನಿಂದ ಬೇಹುಗಾರಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡುವುದು ಗಂಭೀರ ವಿಷಯವಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಡಲಿದೆ ಎಂದು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಹೇಳಿದ್ದಾರೆ.
ಪೆಗಾಸಸ್ ಬಳಸಿ ಗೂಢಚರ್ಯೆ ನಡೆಸಲಾಗುತ್ತಿದೆಯೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸದನದಲ್ಲಿ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದಾಗ ಈ ಬಗ್ಗೆ ಪ್ರಧಾನಿಗಳು ಸಮಂಜಸ ಉತ್ತರ ನೀಡಿಲ್ಲ. ಇದಕ್ಕೆ ಇಂಬು ನೀಡುವಂತೆ ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಬಿತ್ತರವಾಗಿವೆ. ಹೀಗಾಗಿ ಕೇಂದ್ರದಿಂದ ಬೇಹುಗಾರಿಕೆ ನಡೆಯುತ್ತಿದೆ ಎಂದು ಶ್ರೀನಿವಾಸ್ ಆರೋಪಿಸಿದರು.
ದೇಶದ ನಾಗರಿಕರ ಮೂಲ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ದೇಶದ್ರೋಹದ ಕೆಲಸ ಮಾಡುತ್ತಿದೆ. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಆಟವಾಡುತ್ತಿದೆ. ಪೆಗಾಸಸ್ ಅನ್ನು ಉಗ್ರವಾದದ ವಿರುದ್ಧ ಹೋರಾಡಲು ಬಳಕೆ ಮಾಡಲಾಗುತ್ತದೆ. ಆದರೆ, ಕೇಂದ್ರ ಸರ್ಕಾರ ತನ್ನ ವಿರೋಧಿಗಳ ವಿರುದ್ಧ ಇದನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಹೀಗಾಗಿ ಕೇಸರಿ ಪಕ್ಷವನ್ನು ಬಿಜೆಪಿಯ ಬದಲಾಗಿ 'ಜಾಸೂಸ್ ಪಕ್ಷ' ಎಂದು ಹೆಸರಿಡಬೇಕು ಎಂದು ಹರಿಹಾಯ್ದಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ