ಖುಷಿನಗರ(ಉತ್ತರ ಪ್ರದೇಶ): 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಅಂಗವಾಗಿ ದೇಶಾದ್ಯಂತ ಇಂದಿನಿಂದ 'ಹರ್ ಘರ್ ತಿರಂಗಾ' ಅಭಿಯಾನ ಆರಂಭವಾಗಿದೆ. ದೇಶದ ಪ್ರತಿಯೊಬ್ಬರ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಇದರ ಬೆನ್ನಲ್ಲೇ ವ್ಯಕ್ತಿಯೋರ್ವ ತನ್ನ ನಿವಾಸದ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ್ದು, ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದ ಖುಷಿನಗರದ ತರಿಯಾ ಸುಜನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವೆದುಪರ್ ಮುಸ್ತಾಕಿಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಅಸ್ಲಾಂ ಎಂಬಾತ ತನ್ನ ಮನೆಯ ಮೇಲೆ ಪಾಕಿಸ್ತಾನದ ಬಾವುಟ ಹಾರಿಸಿದ್ದಾನೆಂದು ಪೊಲೀಸ್ ವರಿಷ್ಠಾಧಿಕಾರಿ ರಿತೇಶ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಇದನ್ನೂ ಓದಿ: 90 ಡಿಗ್ರಿ ತಿರುಗಿದ ಕತ್ತು; ಪಾಕಿಸ್ತಾನ ಬಾಲಕಿಗೆ ಮರುಜೀವ ನೀಡಿದ ಭಾರತದ ವೈದ್ಯರು
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು ಆತನನ್ನು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ. ಜೊತೆಗೆ ಆತನ ವಿರುದ್ಧ ದೇಶ ವಿರೋಧಿ ಚಟುವಟಿಕೆ ಪ್ರಕರಣ ದಾಖಲು ಮಾಡಲಾಗಿದೆ. ಈ ವ್ಯಕ್ತಿಗೆ ಸಹಾಯ ಮಾಡಿರುವ ಆರೋಪದ ಮೇಲೆ ಯುವತಿ ಸೇರಿದಂತೆ ಮತ್ತಿಬ್ಬರನ್ನು ಬಂಧಿಸಲಾಗಿದೆ. ಪಾಕಿಸ್ತಾನದ ಧ್ವಜ ಇವರ ಕೈಗೆ ಹೇಗೆ, ಎಲ್ಲಿಂದ ಬಂತು ಎಂಬುದರ ಕುರಿತು ಇದೀಗ ಪ್ರಶ್ನೆ ಉದ್ಭವಾಗಿದ್ದು, ಬಂಧಿತರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.