ಅಪ್ಪ, ಅಮ್ಮ.. ನಾನು ಮತ್ತೆ ಸೋತಿದ್ದೇನೆ. ಎಲ್ಲರ ಮುಂದೆ ನಾನು ಪ್ರಶ್ನೆಯಾಗಿ ಉಳಿದುಕೊಂಡಿದ್ದೇನೆ. ನಾನು ಮತ್ತೆ ಅವನಿಂದ ಮೋಸ ಹೋಗಿದ್ದೇನೆ. ಈಗ ನನಗೆ ಏನು ಮಾಡಬೇಕೆಂಬುದು ಗೊತ್ತಾಗುತ್ತಿಲ್ಲ. ನಿಮ್ಮ ಮುಂದೆ ಬರಲು ಸಾಧ್ಯವಿಲ್ಲ. ನಾನು ಇನ್ನು ಬದುಕಲು ಇಷ್ಟ ಪಡುವುದಿಲ್ಲ.. ಇದು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಯುವತಿ ಬರೆದಿಟ್ಟ ಸೂಸೈಡ್ ನೋಟ್.. ಇದರ ಜೊತೆಗೆ ಆಕೆಯ ಪ್ರಿಯಕರನ ಚಿತ್ರವನ್ನೂ ಕೂಡಾ ಆಕೆ ಬರೆದಿದ್ದಾಳೆ.
ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯ ಪೆದ್ದಮುಪ್ಪರಮ್ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ಇಂಥದೊಂದು ಘಟನೆ ನಡೆದಿದೆ. ಶಾರದಾ ಮತ್ತು ಪೊಲೆಪಲ್ಲಿ ವೆಂಕಣ್ಣ ಎಂಬ ದಂಪತಿಯ ಪುತ್ರಿಯಾದ ಶರಣ್ಯಾ (22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10ನೇ ತರಗತಿಯವರೆಗೆ ಓದಿ, ನಂತರ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಶರಣ್ಯ ಅದೇ ಗ್ರಾಮದಲ್ಲಿದ್ದ, ಕಾರು ಚಾಲಕನಾಗಿದ್ದ ಹಾಗೂ ಪಕ್ಷವೊಂದರ ಯುವ ವಿಭಾಗದ ನಾಯಕನಾಗಿದ್ದ ಯುವಕನನ್ನು ಪ್ರೀತಿಸುತ್ತಿದ್ದಳು. ಆತನೂ ಕೂಡಾ ಆಕೆಯನ್ನು ಪ್ರೀತಿಸುತ್ತಿದ್ದ.
ಮದುವೆ ವಿಚಾರಕ್ಕೆ ಬಂದಾಗ, ಯುವಕ ಮೊದಲಿಗೆ ನಿರಾಕರಿಸಿದ್ದಾನೆ. ನಂತರ ಗ್ರಾಮದಲ್ಲಿ ಪಂಚಾಯಿತಿ ನಡೆಸಿ, ಮದುವೆಗೆ ಯುವಕನನ್ನು ಒಪ್ಪಿಸಲಾಗಿತ್ತು. ಆದರೆ, ಆತ ಆರು ತಿಂಗಳು ಸಮಯ ಕೇಳಿದ್ದ. ಯುವಕ ತನ್ನನ್ನು ಮೋಸಗೊಳಿಸಲೆಂದೇ ಆರು ತಿಂಗಳ ಸಮಯ ಕೇಳಿದ್ದಾನೆ ಎಂದುಕೊಂಡ ಯುವತಿ ಡೆತ್ ನೋಟ್ನೊಂದಿಗೆ, ಆತನ ಭಾವಚಿತ್ರ ಬರೆದು ತನ್ನದೇ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: ಒಂದೇ ಹೆಸರು, ಒಂದೇ ಶಾಲೆ, ಒಂದೇ ಉದ್ಯೋಗ.. ಸೇಮ್ ಪಿಂಚ್.. ಮೌನಿಕಾತ್ರಯರ ಕುತೂಹಲಕಾರಿ ಕತೆ..
ಬಾಲಕಿಯ ಸಾವಿಗೆ ಯುವಕನೇ ಕಾರಣ ಎಂದು ಮೃತನ ಕುಟುಂಬಸ್ಥರು, ಸಂಬಂಧಿಕರು, ಗ್ರಾಮಸ್ಥರು ಸಂತ್ರಸ್ತೆಯ ಮನೆ ಮುಂದೆ ಧರಣಿ ನಡೆಸಿದ್ದಾರೆ. ತಪ್ಪಿತಸ್ಥರ ಕುಟುಂಬವನ್ನು ಶಿಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ. ಯುವತಿ ಸಾವಿನ ಬಗ್ಗೆ ಲಿಖಿತ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.