ಶಿಮ್ಲಾ (ಹಿಮಾಚಲ ಪ್ರದೇಶ) : ಸಮಾಜದಲ್ಲಿ ಧಾರ್ಮಿಕ ಸಾಮರಸ್ಯವನ್ನು ಹರಡುವ ಸದುದ್ದೇಶದಿಂದ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಹಿಂದೂ ದೇವಸ್ಥಾನಕ್ಕೆ ಆಗಮಿಸಿ ಮುಸ್ಲಿಂ ಪದ್ಧತಿಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಂಥದ್ದೊಂದು ಅಪರೂಪದ ಮದುವೆ ಶಿಮ್ಲಾ ಜಿಲ್ಲೆಯ ರಾಮ್‌ಪುರ್ ಪ್ರದೇಶದಲ್ಲಿ ದೇವಸ್ಥಾನದಲ್ಲಿ ಸೋಮವಾರ ನಡೆಯಿತು.
ಈ ಮದುವೆಯು ಇಲ್ಲಿನ ಠಾಕೂರ್ ಸತ್ಯನಾರಾಯಣ ದೇವಸ್ಥಾನದ ಆವರಣದಲ್ಲಿ ನೆರವೇರಿತು. ದೇಗುಲವನ್ನು ವಿಶ್ವ ಹಿಂದೂ ಪರಿಷತ್ ನಡೆಸುತ್ತಿದೆ. ಮುಸ್ಲಿಂ ಮತ್ತು ಹಿಂದೂ ಸಮುದಾಯದ ಅನೇಕ ಜನರು ಮದುವೆಗೆ ಸಾಕ್ಷಿಯಾಗಿದ್ದರು. ಮೌಲ್ವಿ 'ನಿಖಾ' ವಿಧಿವಿಧಾನಗಳನ್ನು ಪೂರೈಸಿದರು. ಸಾಕ್ಷಿಗಳು ಮತ್ತು ವಕೀಲ ಹಾಜರಿದ್ದರು.
ಜನರಲ್ಲಿ ಸೌಹಾರ್ದತೆ, ಸಹೋದರತೆ ಮತ್ತು ನಾವೆಲ್ಲ ಒಂದೇ ಎಂಬ ಭಾವನೆಯನ್ನು ಸಮಾಜದಲ್ಲಿ ಸಾರುವ ಉದ್ದೇಶ ಈ ವಿಶೇಷ ಮದುವೆಯ ಹಿಂದಿತ್ತು ಎಂದು ನೂತನ ದಂಪತಿ ಹಾಗು ಅವರ ಸಂಬಂಧಿಕರು ಹೇಳಿದರು. ಸತ್ಯನಾರಾಯಣ ದೇವಸ್ಥಾನದ ಕಟ್ಟಡವು ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಚೇರಿ ಕೂಡಾ ಹೌದು ಅನ್ನೋದು ಗಮನಾರ್ಹ ಸಂಗತಿ.
ಠಾಕೂರ್ ಸತ್ಯನಾರಾಯಣ ದೇವಸ್ಥಾನದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಎನ್‌ಐ ಸುದ್ದಿ ಸಂಸ್ಥೆಯ ಪ್ರತಿನಿಧಿಗೆ ಈ ಮದುವೆಯ ಕುರಿತು ಪ್ರತಿಕ್ರಿಯಿಸಿ, "ಇದು ವಿಶ್ವ ಹಿಂದೂ ಪರಿಷತ್ ಆಡಳಿತಕ್ಕೊಳಪಟ್ಟ ದೇವಸ್ಥಾನವಾಗಿದೆ. ಇದರ ಜೊತೆಗೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್) ಜಿಲ್ಲಾ ಕಚೇರಿ ಕೂಡಾ ಹೌದು. ವಿಶ್ವ ಹಿಂದೂ ಪರಿಷತ್ ಮತ್ತು ಆರ್‌ಎಸ್‌ಎಸ್ ಸಂಘಟನೆಯನ್ನು ಮುಸ್ಲಿಂ ವಿರೋಧಿ ಸಂಘಟನೆಗಳೆಂದು ಪದೇ ಪದೇ ಆರೋಪಿಸಲಾಗುತ್ತಿದೆ. ಆದರೆ ಇಲ್ಲಿ ಮುಸ್ಲಿಂ ಯುವಕ ಮತ್ತು ಮುಸ್ಲಿಂ ಯುವತಿ ದೇವಸ್ಥಾನದ ಆವರಣದಲ್ಲಿಯೇ ಮದುವೆ ಆಗಿದ್ದಾರೆ. ಇದು ಸನಾತನ ಧರ್ಮ ಅಂದರೇನು ಅನ್ನೋದಕ್ಕೆ ಸ್ಪಷ್ಟ ಉದಾಹರಣೆ. ಅಷ್ಟೇ ಅಲ್ಲ, ಅನೇಕರಿಗೆ ಇದೊಂದು ಪ್ರೇರಣೆ ಒದಗಿಸುವ ವಿದ್ಯಮಾನ" ಎಂದು ಅವರು ಹೇಳಿದರು.
ವಧುವಿನ ತಂದೆ ಮಹೇಂದ್ರ ಮಾಲಿಕ್ ಸಿಂಗ್ ಮಾತನಾಡಿ, "ರಾಮ್‌ಪುರದ ಸತ್ಯನಾರಾಯಣ ದೇವಸ್ಥಾನ ಕಟ್ಟಡದ ಆವರಣದಲ್ಲಿ ನನ್ನ ಮಗಳ ವಿವಾಹ ನಡೆಯಿತು. ಈ ಮದುವೆ ಆಯೋಜಿಸಲು ನಗರದ ಜನರು, ವಿಶ್ವ ಹಿಂದೂ ಪರಿಷತ್ ಅಥವಾ ದೇವಸ್ಥಾನ ಟ್ರಸ್ಟ್‌ನವರು ಎಲ್ಲರೂ ಸಕ್ರಿಯವಾಗಿ ಸಹಕರಿಸಿದ್ದಾರೆ. ಈ ಮುಖೇನ ರಾಮ್‌ಪುರ್‌ದ ಜನರು ಜನರ ನಡುವೆ ಭ್ರಾತೃತ್ವದ ಸಂದೇಶವನ್ನು ಸಾರಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು,"ಯಾರೂ ಕೂಡಾ ಇನ್ನೊಬ್ಬರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ಹಾಗೊಂದು ವೇಳೆ ಮಾಡಿದರೆ ಸಮಾಜದ ಜನರ ನಡುವೆ ಭ್ರಾತೃತ್ವ ನಾಶವಾಗುತ್ತದೆ." ಎಂದು ಕಿವಿಮಾತು ಹೇಳಿದರು. "ನನ್ನ ಮಗಳು ಎಂ.ಟೆಕ್ ಸಿವಿಲ್ ಎಂಜಿನಿಯರ್ ಆಗಿದ್ದು ಚಿನ್ನದ ಪದಕ ವಿಜೇತೆ. ಹಾಗೆಯೇ ನನ್ನ ಅಳಿಯ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ" ಎಂದು ಮಹೇಂದ್ರ ಮಾಲಿಕ್ ಸಿಂಗ್ ಇದೇ ವೇಳೆ ಮಾಹಿತಿ ನೀಡಿದರು.
ಇದನ್ನೂ ಓದಿ: 'ಅಂತರ್ಜಾತಿ ವಿವಾಹಕ್ಕೆ 3 ಲಕ್ಷ, ಪೊಲೀಸರಿಗೆ ದೂರು ಕೊಟ್ಟಿದ್ದಕ್ಕೆ 3 ಲಕ್ಷ ರೂಪಾಯಿ ದಂಡ ಹಾಕಿದ್ರು'