ಫತೇಪುರ್(ಉತ್ತರ ಪ್ರದೇಶ): ಡಿಜಿಟಲ್ ಇಂಡಿಯಾ ಯುಗದಲ್ಲಿ ಫೇಸ್ಬುಕ್, ವಾಟ್ಸಾಪ್ ಮೂಲಕ ಜನರು ಮೋಸ ಹೋಗುತ್ತಿರುವ ಘಟನೆ ಮೇಲಿಂದ ಮೇಲೆ ನಡೆಯುತ್ತಿದೆ. ಇದೀಗ ಇಂತಹದ್ದೇ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಫತೇಪುರದ ಯುವಕನೊಬ್ಬ ಫೇಸ್ಬುಕ್ನಲ್ಲಿ ಕೋಲ್ಕತ್ತಾದ ಹುಡುಗಿಯೊಂದಿಗೆ ಪರಿಚಯವಾಗುತ್ತಾನೆ. ಇಬ್ಬರ ನಡುವೆ ಸ್ನೇಹ ಬೆಳೆದು ಕ್ರಮೇಣ ಅದು ಪ್ರೀತಿಯಾಗಿ ಬದಲಾಗುತ್ತದೆ. ಈ ವೇಳೆ ಕೋಲ್ಕತ್ತಾಗೆ ಆಗಮಿಸಿದ ಯುವಕ ಆಕೆ ಜತೆ ಮದುವೆ ಮಾಡಿಕೊಂಡಿದ್ದಾನೆ. ತದನಂತರ 9 ತಿಂಗಳ ಮಹಿಳೆ ಮನೆಯಲ್ಲಿ ವಾಸವಾಗಿರುವ ಆತ ಸಂದರ್ಶನ ನೀಡಲು ಹೋಗುತ್ತೇನೆಂದು ಹೇಳಿ ಆಭರಣ-ನಗದು ಹೊತ್ತು ಪರಾರಿಯಾಗಿದ್ದಾನೆ. ಬರೋಬ್ಬರಿ 13 ತಿಂಗಳಾದರೂ ಆತ ವಾಪಸ್ ಬರದ ಕಾರಣ ಯುವತಿ ಫತೇಪುರ್ಗೆ ತೆರಳಿ, ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ನ್ಯಾಯಕ್ಕಾಗಿ ಮನವಿ ಮಾಡಿದ್ದಾಳೆ.

2019ರಲ್ಲಿ ಮದುವೆ: ಫತೇಪುರದ ಅಬುನಗರದ ಅಭಿಷೇಕ್ ಆರ್ಯ ಪುತ್ರ ರಾಜು ದೆಹಲಿಯಲ್ಲಿ ವಾಸವಾಗಿದ್ದಾಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದನು. ಈ ವೇಳೆ ಕೋಲ್ಕತ್ತಾದ ಸುನೀತಾ ಧನುಕ್ ಮಗಳು ಪಲ್ಲಾಸ್ ಜತೆ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದರು. ಇಬ್ಬರ ನಡುವಿನ ಸ್ನೇಹ ಪ್ರೀತಿಯಾಗಿ ಬದಲಾಗಿ ತದನಂತರ ಮಾರ್ಚ್ 26, 2019ರಂದು ವಿವಾಹವಾಗಿದ್ದರು. ಇದಾದ ಬಳಿಕ 9 ತಿಂಗಳು ಇಬ್ಬರು ಒಟ್ಟಿಗೆ ಜೀವನ ನಡೆಸಿದ್ದಾರೆ. ಸುನೀತಾ ತಾಯಿ ಕೋಲ್ಕತ್ತಾದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಮಗಳು ಪಲ್ಲಾಸ್ ಕೂಡ ಅಲ್ಲಿ ಕೆಲಸ ಮಾಡುತ್ತಿದ್ದಳು.

ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ತದನಂತರ ಜಗಳ ಪ್ರಾರಂಭವಾಗಿದೆ. ಈ ವೇಳೆ ಸಂದರ್ಶನ ನೀಡುವುದಾಗಿ ಹೇಳಿ ದೆಹಲಿಗೆ ಹೋಗಿದ್ದಾನೆ. ಈ ವೇಳೆ ಮನೆಯಲ್ಲಿನ ಚಿನ್ನಾಭರಣ(ಮೂರು ಲಕ್ಷ ಮೌಲ್ಯ) ಹಾಗೂ ಒಂದು ಲಕ್ಷ ರೂ.ನಗದು ತೆಗೆದುಕೊಂಡು ಪರಾರಿಯಾಗಿದ್ದಾನೆಂದು ಆರೋಪಿಸಿದ್ದಾರೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದು,ಅವರ ಮನೆಗೆ ತೆರಳಿದ್ದ ವೇಳೆ ಅವರು ಬೇರೆಡೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.