ಹೈದರಾಬಾದ್ (ತೆಲಂಗಾಣ): ಜೂಜು, ಕುಡಿತ ಮನೆಹಾಳು ಮಾಡುತ್ತದೆ ಎಂದು ಗೊತ್ತಿದ್ದರೂ ಅವುಗಳ ಚಟಕ್ಕೆ ಬಿದ್ದು ನಾಶವಾದ ಅದೆಷ್ಟೋ ಸುದ್ದಿ ನೋಡಿದ್ದೇವೆ. ಅದೇ ತೆರನಾದ ಮತ್ತೊಂದು ಘಟನೆ ತೆಲಂಗಾಣದಿಂದ ವರದಿಯಾಗಿದೆ. ಸರ್ಕಾರಕ್ಕೆ ಭೂಮಿ ನೀಡಿ ಬಂದ ಪರಿಹಾರದ 92 ಲಕ್ಷ ಹಣವನ್ನು ಮಗನೊಬ್ಬ ಆನ್ಲೈನ್ ಕ್ಯಾಸಿನೋದಲ್ಲಿ ಕಳೆದುಕೊಂಡು, ಕುಟುಂಬವನ್ನು ಬೀದಿಗೆ ತಂದಿದ್ದಾನೆ.
ರಂಗಾರೆಡ್ಡಿ ಜಿಲ್ಲೆಯ ಸೀತಾರಾಮಪುರಂ ಗ್ರಾಮದ ಹರ್ಷವರ್ಧನ್ ರೆಡ್ಡಿ ಜೂಜಿನಲ್ಲಿ ಹಣ ಕಳೆದುಕೊಂಡವ. ಕೃಷಿ ಕುಟುಂಬದ ಹಿನ್ನೆಲೆಯ ಈತ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ತಂದೆ ಶ್ರೀನಿವಾಸ್ರೆಡ್ಡಿ ಅವರಿಗೆ ಗ್ರಾಮದಲ್ಲಿ 10 ಎಕರೆ ಜಮೀನಿತ್ತು. ಇತ್ತೀಚೆಗೆ ಸರ್ಕಾರ ಆ ಜಮೀನನ್ನು ಟಿಎಸ್‌ಐಐಸಿಗೆ ಹಸ್ತಾಂತರಿಸಿದೆ. ಭೂಸ್ವಾಧೀನದಡಿ ಎಕರೆಗೆ 10.5 ಲಕ್ಷ ರೂಪಾಯಿಯಂತೆ ಒಟ್ಟಾರೆ 1.05 ಕೋಟಿ ರೂಪಾಯಿ ಪರಿಹಾರ ನೀಡಿದೆ.
ಬಂದ ಹಣದಲ್ಲಿ ತಂದೆ ಮತ್ತೊಂದೆಡೆ ಜಮೀನು ತೆಗೆದುಕೊಳ್ಳಲು 70 ಲಕ್ಷ ರೂಪಾಯಿಗೆ ವ್ಯಾಪಾರ ಕುದುರಿಸಿದ್ದರು. ಮುಂಗಡವಾಗಿ 20 ಲಕ್ಷ ರೂ. ನೀಡಲಾಗಿತ್ತು. ಉಳಿದ 85 ಲಕ್ಷ ರೂಪಾಯಿಯನ್ನು ತಂದೆ- ತಾಯಿ ಖಾತೆಗೆ ವರ್ಗಾಯಿಸಿಕೊಂಡಿದ್ದರು.
ಭೂ ಪರಿಹಾರವನ್ನು ನುಂಗಿದ ಕ್ಯಾಸಿನೋ: ಈ ಮಧ್ಯೆ ಮಗ ಹರ್ಷವರ್ಧನ್ರೆಡ್ಡಿ ಮೊಬೈಲ್ನಲ್ಲಿ ಕ್ಯಾಸಿನೋ ಗೇಮ್ ಆಡುತ್ತಿದ್ದ. ಕುಟುಂಬಕ್ಕೆ ಭೂಪರಿಹಾರದಡಿ 1 ಕೋಟಿ ರೂಪಾಯಿ ಹಣ ಬಂದಿದೆ ಎಂದು ತಿಳಿದಿದ್ದ. ಹೊಸದಾಗಿ ಖರೀದಿಸಿದ ಭೂಮಿಯ ಮಾಲೀಕರಿಗೆ ಹಣ ನೀಡುವುದಾಗಿ ತಂದೆಯ ಖಾತೆಯಿಂದ 42.5 ಲಕ್ಷ ರೂ.ಗಳನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಬಳಿಕ ತಾಯಿಯಿಂದಲೂ ಅಷ್ಟೇ ಮೊತ್ತವನ್ನು ಪಡೆದಿದ್ದಾನೆ.
ಅಷ್ಟೂ ಹಣವನ್ನು ಕ್ಯಾಸಿನೋ ಗೇಮ್ನಲ್ಲಿ ಹೂಡಿಕೆ ಮಾಡಿ ಮಗ ಸೋತಿದ್ದಾನೆ. ಅಲ್ಲದೇ, ಊರಿನಲ್ಲಿ 7 ಲಕ್ಷ ರೂಪಾಯಿ ಸಾಲ ಕೂಡ ಮಾಡಿ ಅದನ್ನೂ ಗೇಮ್ನಲ್ಲಿ ಪಣಕ್ಕಿಟ್ಟು ಕಳೆದುಕೊಂಡಿದ್ದಾನೆ. ಬಳಿಕ ಕುಟುಂಬಸ್ಥರು ಹಣದ ಬಗ್ಗೆ ವಿಚಾರಿಸಿದಾಗ ಆನ್ಲೈನ್ ಗೇಮ್ನಲ್ಲಿ ಹಾಳು ಮಾಡಿದ್ದಾಗಿ ಬಾಯಿಬಿಟ್ಟಿದ್ದಾನೆ. 92 ಲಕ್ಷ ರೂಪಾಯಿ ಹಣವನ್ನು ಹರ್ಷವರ್ಧನ್ ಜೂಜಾಡಿ ಸೋತಿರುವುದು ಕುಟುಂಬವನ್ನು ಬೀದಿಪಾಲು ಮಾಡಿದೆ. ಈ ಕುರಿತು ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ.
ಓದಿ: ಕೊರೊನಾ, ಮಾಟಮಂತ್ರಕ್ಕೆ ಹೆದರಿ 2 ವರ್ಷ ಮನೆಯಿಂದ ಹೊರಬರದ ತಾಯಿ ಮಗಳು!