ಪ್ರಕಾಶಂ (ಆಂಧ್ರಪ್ರದೇಶ): ಯುವಕನೊಬ್ಬ ತನ್ನ ಸ್ವಂತ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಸೇರಿ ಮೂವರನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಓರ್ವ ಗರ್ಭಿಣಿ ಕೂಡ ಸಾವನ್ನಪ್ಪಿದ್ದಾರೆ.
ಇಲ್ಲಿನ ಗಿಡ್ಡಲೂರು ಮಂಡಲದ ಕೊತ್ತಪಲ್ಲಿ ಗ್ರಾಮದ ನಿವಾಸಿಗಳಾದ ತಿರುಮಲಯ್ಯ, ಪತ್ನಿ ಈಶ್ವರಮ್ಮ ಹಾಗೂ ಪುತ್ರಿ ಸ್ವಪ್ನಾ ಎಂಬುವವರೇ ಕೊಲೆಯಾದವರು. ತಿರುಮಲಯ್ಯನವರ ಅಣ್ಣನ ಮಗ ಮಲ್ಲಿಕಾರ್ಜುನ ಯಾದವ್ ಎಂಬುವವನೇ ಈ ಕೃತ್ಯ ಎಸಗಿದ್ದು, ಮೃತ ಸ್ವಪ್ನಾ ಆರು ತಿಂಗಳ ಗರ್ಭಿಣಿಯಾಗಿದ್ದಳು ಎಂದು ತಿಳಿದು ಬಂದಿದೆ.
ತಿರುಮಲಯ್ಯನವರು ಕ್ಷುದ್ರ ಪೂಜೆ ಮಾಡುವ ಮೂಲಕ ತನ್ನ ಬೆಳವಣಿಗೆಗೆ ಅಡ್ಡಿಯಾಗುತ್ತಿದ್ದಾರೆ ಎಂಬ ಶಂಕೆಯನ್ನು ಮಲ್ಲಿಕಾರ್ಜುನ ಹೊಂದಿದ್ದ. ಇದೇ ಕಾರಣದಿಂದ ಜುಲೈ 12ರಂದು ಇಡೀ ಕುಟುಂಬದ ಮೇಲೆ ಕಲ್ಲು ತೂರಾಟ ನಡೆಸಿದ್ದ. ಇದರಿಂದ ಪತ್ನಿ ಈಶ್ವರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದು, ತಿರುಮಲಯ್ಯ ಹಾಗೂ ಪುತ್ರಿ ಸ್ವಪ್ನಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೇ ತಂದೆ ಮತ್ತು ಮಗಳು ಕೂಡ ಮೃತಪಟ್ಟಿದ್ದಾರೆ. ಆರು ತಿಂಗಳ ಗರ್ಭಿಣಿಯಾಗಿದ್ದ ಸ್ವಪ್ನಾ 9 ದಿನಗಳ ಕಾಲ ಸಾವಿನೊಂದಿಗೆ ಹೋರಾಡಿ ಕೊನೆಯುಸಿರೆಳೆದಿದ್ದಾರೆ. ಆರೋಪಿ ಮಲ್ಲಿಕಾರ್ಜುನಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಓರ್ವ ಸ್ವಾಮೀಜಿಯ ಮಾತು ನಂಬಿ ಮಲ್ಲಿಕಾರ್ಜುನ ಈ ಕೊಲೆಗಳನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಹೌರಾದಲ್ಲಿ ನಕಲಿ ಮದ್ಯ ಸೇವಿಸಿ 9 ಜನ ಸಾವು: ಹಲವರು ಅಸ್ವಸ್ಥ