ಹೈದರಾಬಾದ್(ತೆಲಂಗಾಣ): ಇಲ್ಲಿನ ಮಿಯಾಪುರ್ದಲ್ಲಿ ಮದುವೆ ನಿಶ್ಚಯವಾಗಿದ್ದ ಯುವಕನಿಂದ ಯುವತಿ ಮತ್ತು ಆಕೆಯ ತಾಯಿ ಮೇಲೆ ಚಾಕುವಿನಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ತೀವ್ರ ಹಲ್ಲೆಗೊಳಗಾಗಿದ್ದ ಯುವತಿಯ ತಾಯಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಪೊಲೀಸರ ಪ್ರಕಾರ, ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಯುವತಿಯೊಬ್ಬಳು ತನ್ನ ತಾಯಿ ಶೋಭಾ ಮತ್ತು ಸಹೋದರನೊಂದಿಗೆ 8 ತಿಂಗಳ ಹಿಂದೆ ಹೈದರಾಬಾದ್‌ಗೆ ವಲಸೆ ಬಂದಿದ್ದರು. ಗುಂಟೂರಿನಲ್ಲಿ ಯುವತಿಯ ಕುಟುಂಬ ವಾಸಿಸುತ್ತಿದ್ದ ವೇಳೆ ಯುವತಿಗೆ ರಾಯಪಲ್ಲಿಯ ಸಂದೀಪ್ ಎಂಬ ಯುವಕನ ಪರಿಚಯವಾಗಿತ್ತು. ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. ಯುವತಿ ಮತ್ತು ಸಂದೀಪ್ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮಗಳ ಇಚ್ಛೆಯಂತೆ ತಾಯಿ ಶೋಭಾ ಸಂದೀಪ್ ಜೊತೆ ನಿಶ್ಚಿತಾರ್ಥ ಮಾಡಿಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಿಶ್ಚಿತಾರ್ಥವಾದ ಕೆಲ ತಿಂಗಳ ಬಳಿಕ ಇಬ್ಬರ ಮಧ್ಯೆ ವೈಮನಸ್ಸು ಮೂಡಿದೆ. ಆಗನಿಂದಲೂ ಯುವತಿ ಸಂದೀಪನನ್ನು ದೂರವಿಟ್ಟಿದ್ದರು. ಕ್ರಮೇಣವಾಗಿ ಸಂದೀಪ್ ಜೊತೆ ಯುವತಿ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಬಳಿಕ ಯುವತಿ ಕುಟುಂಬ ಹೈದರಾಬಾದ್‌ಗೆ ವಲಸೆ ಬಂದಿದೆ. ಹೈದರಾಬಾದ್‌ಗೆ ಬಂದ ಯುವತಿಗೆ ಸಂದೀಪ್ ಆಗಾಗ ಕರೆ ಮಾಡಿ, ವಾಟ್ಸಪ್ ಸಂದೇಶಗಳನ್ನು ಕಳುಹಿಸಿ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾಯಪಲ್ಲಿಯಿಂದ ಮಿಯಾಪುರಕ್ಕೆ ಬಂದಿದ್ದ ಸಂದೀಪ್ ಚಾಕು ಹಿಡಿದು ನೇರ ಯುವತಿಯ ಮನೆಗೆ ಹೋಗಿದ್ದಾನೆ. ಅಲ್ಲಿ ಯುವತಿಯ ತಾಯಿಯೊಂದಿಗೆ ಜಗಳವಾಡಿದನು. ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಸಂದೀಪ್ ಯುವತಿಯ ತಾಯಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ತಾಯಿ ಶೋಭಾ ಮೇಲೆ ಸಂದೀಪ್ ಚಾಕುವಿನಿಂದ ದಾಳಿ ನಡೆಸುತ್ತಿರುವುದನ್ನು ನೋಡಿದ ಯುವತಿ ತನ್ನ ತಾಯಿಯ ರಕ್ಷಣೆ ಬಂದಿದ್ದಾರೆ. ಈ ಸಮಯದಲ್ಲಿ ಸಂದೀಪ್ ಯುವತಿಯ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಭಯಭೀತನಾದ ಸಂದೀಪ್ ಅದೇ ಚಾಕುವಿನಿಂದ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ಹೇಳಿದರು.
ಚಿಕಿತ್ಸೆ ಫಲಕಾರಿಯಾಗದೇ ಯುವತಿ ತಾಯಿ ಸಾವನ್ನಪ್ಪಿದ್ದು, ಸಂದೀಪ್ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಓದಿ: ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ವಿದ್ಯುತ್ ಕಂಬಕ್ಕೆ ಗುದ್ದಿದ ಬಿಎಂಟಿಸಿ ಬಸ್