ಅಯೋಧ್ಯೆ(ಉತ್ತರ ಪ್ರದೇಶ): ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 2022ರ ವರೆಗೆ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ ವಿಸ್ತರಿಸಿದ್ದಾರೆ. ಈ ಯೋಜನೆಯು ಅಂತ್ಯೋದಯ ಕಾರ್ಡುದಾರರೆಂದು ವರ್ಗೀಕರಿಸಲಾದ ಬಡ ಕುಟುಂಬಗಳಿಗೆ ಉಚಿತವಾಗಿ ಪಡಿತರವನ್ನು ಒದಗಿಸಲಾಗುತ್ತಿದೆ. 2020ರ ಮಾರ್ಚ್‌ನಲ್ಲಿ ಆರಂಭಿಸಲಾಗಿದ್ದ ಈ ಯೋಜನೆಯ ಪ್ರಯೋಜನವನ್ನು ರಾಜ್ಯದ 15 ಕೋಟಿ ಪಡೆಯುತ್ತಿದ್ದು, 2021ರ ನವೆಂಬರ್‌ಗೆ ಕೊನೆಗೊಳ್ಳಬೇಕಿತ್ತು.
ಅಯೋಧ್ಯೆಯಲ್ಲಿ ನಿನ್ನೆ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ, ರಾಮರಾಜ್ಯದ ದೃಷ್ಟಿಕೋನವು ಎಲ್ಲರ ಕಲ್ಯಾಣವನ್ನು ಒಳಗೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ಬಿಕ್ಕಟ್ಟಿನ ಸಮಯದಲ್ಲಿ ನಾಯಕತ್ವವು ಬಡವರ ಪರವಾಗಿ ನಿಲ್ಲುತ್ತದೆ. ಕೋವಿಡ್ -19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ ಪ್ರಧಾನಮಂತ್ರಿ ಅನ್ನ ಯೋಜನೆಯು ಅದೇ ರೀತಿ ಮಾಡಿತು. ಈ ಯೋಜನೆಯು ನವೆಂಬರ್‌ನಲ್ಲಿ ಕೊನೆಗೊಳ್ಳಬೇಕಿದ್ದರೂ, ಯುಪಿ ಸರ್ಕಾರ ಇದನ್ನು ಮುಂದುವರಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಕೋವಿಡ್ ಪ್ರಕರಣಗಳು ಕಡಿಮೆಯಾಗಿದ್ದರೂ, ಸಾಂಕ್ರಾಮಿಕ ರೋಗದಿಂದ ಉಂಟಾದ ದುಃಖ ಇನ್ನೂ ಹೋಗಿಲ್ಲ. ಹೀಗಾಗಿ ಈ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ. ರಾಜ್ಯದ 15 ಕೋಟಿ ಬಡ ಕುಟುಂಬಗಳಿಗೆ ರಾಜ್ಯವು ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ ಎಂದು ತಿಳಿಸಿದ್ದಾರೆ.
ಮೂಲ ಯೋಜನೆಯಲ್ಲಿ (ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ ಮತ್ತು ಪ್ರತಿ ಮನೆಗೆ ಒಂದು ಕೆಜಿ ದಾಲ್) ಭರವಸೆ ನೀಡುವುದರ ಜೊತೆಗೆ ಯುಪಿ ಸರ್ಕಾರದಿಂದ ಒಂದು ಲೀಟರ್ ಅಡುಗೆ ಎಣ್ಣೆ, ತಲಾ ಒಂದು ಕೆಜಿ ಉಪ್ಪು ಮತ್ತು ಸಕ್ಕರೆ ನೀಡಲಾಗುತ್ತದೆ. ಆಹಾರ ಧಾನ್ಯದ ಜೊತೆಗೆ ಉಪ್ಪು, ಸಕ್ಕರೆ ಮತ್ತು ಅಡುಗೆ ಎಣ್ಣೆಯನ್ನು ಸಹ ನಾವು ಜನರಿಗೆ ಒದಗಿಸುತ್ತೇವೆ. ಇದರಿಂದ ಅವರ ಮೂಲಭೂತ ಅಡುಗೆಯ ಅಗತ್ಯಗಳನ್ನು ಪೂರೈಸುತ್ತೇವೆ ಎಂದಿದ್ದಾರೆ.